ಮಂಗಳೂರು : ಚುನಾವಣಾ ವ್ಯವಸ್ಥೆಯ ‘ಎಸ್ಐಆರ್ ಫಾರ್ಮ್ 7’ ಅನ್ನು ದುರ್ಬಳಕೆ ಮಾಡಿಕೊಂಡು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಮತದಾರರನ್ನು ಪಟ್ಟಿಯಿಂದ ಕೈಬಿಡಲು ವ್ಯವಸ್ಥಿತ ಸಂಚು ರೂಪಿಸಿರುವ ಬಿಜೆಪಿ ನಾಯಕರ ವಿರುದ್ಧ ಸೂಕ್ತ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
ಪಡೀಲ್ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಕೆ. ಅವರಿಗೆ ಈ ಕುರಿತು ಶಾಸನಬದ್ಧ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕುಗಳಲ್ಲಿ ಬಿಜೆಪಿ ಕಾರ್ಯಾಲಯದಿಂದಲೇ ಪೂರ್ವ ಮುದ್ರಿತ ಫಾರ್ಮ್ 7 ಅರ್ಜಿಗಳನ್ನು ಭರ್ತಿ ಮಾಡಿ ಚುನಾವಣಾ ಶಾಖೆಗೆ ಸಲ್ಲಿಸಲಾಗಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಸಾಕ್ಷ್ಯಾಧಾರಗಳು ಲಭ್ಯವಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಿಧಾನಸಭಾ ಕ್ಷೇತ್ರವಾರು ಸಲ್ಲಿಕೆಯಾಗಿರುವ ಪ್ರತಿಯೊಂದು ಫಾರ್ಮ್ 7 ಅರ್ಜಿಗಳನ್ನು ಸೂಕ್ಷ್ಮವಾಗಿ ಪರಿಶೀಲನೆಗೆ ಒಳಪಡಿಸಬೇಕು. ನಿರ್ದಿಷ್ಟ ವ್ಯಕ್ತಿಗಳು, ಸಂಘಟನೆಗಳು ಅಥವಾ ರಾಜಕೀಯ ಪಕ್ಷಗಳಿಂದ ಒಟ್ಟಾಗಿ ಸಲ್ಲಿಕೆಯಾಗಿರುವ ಬೃಹತ್ ಪ್ರಮಾಣದ ಅರ್ಜಿಗಳ ಕುರಿತು ವಿಶೇಷ ತನಿಖೆ ನಡೆಸಬೇಕಿದೆ. ಬೆಳ್ತಂಗಡಿಯ ಕೆಲವೇ ಕೆಲವು ಬೂತ್ಗಳಲ್ಲಿ ಬರೋಬ್ಬರಿ 275 ಹಾಗೂ ಪುತ್ತೂರಿನ ಕೇವಲ 2 ಬೂತ್ಗಳಲ್ಲಿ 19 ಅಲ್ಪಸಂಖ್ಯಾತ ಹಕ್ಕುದಾರರ ಹೆಸರುಗಳನ್ನು ರದ್ದುಗೊಳಿಸಲು ಬಿಜೆಪಿ ಅರ್ಜಿ ಗುಜರಾಯಿಸಿರುವುದು ಬೆಳಕಿಗೆ ಬಂದಿದೆ ಎಂದು ಶಾಹುಲ್ ಹಮೀದ್ ಆರೋಪಿಸಿದರು.
ಚುನಾವಣಾ ನಿಯಮಾವಳಿಯ ಪ್ರಕಾರ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಕೋರುವ ಅರ್ಜಿದಾರರು, ತಾವು ನೀಡುವ ಸಕಾರಣಕ್ಕೆ ಸೂಕ್ತ ಸಾಕ್ಷ್ಯ ಮತ್ತು ಪುರಾವೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಇಂತಹ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ದುರುದ್ದೇಶಪೂರ್ವಕವಾಗಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಅವರು ಆಗ್ರಹಿಸಿದರು.
ಇನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿಯು ಅಧಿಕೃತ ಲೆಟರ್ ಹೆಡ್ನಲ್ಲೇ ಅಲ್ಪಸಂಖ್ಯಾತರ ಹೆಸರುಗಳನ್ನು ವಜಾಗೊಳಿಸುವಂತೆ ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹೇರಿದೆ ಎಂದು ಅವರು ದೂರಿದರು. ಈ ನಿಯೋಗದಲ್ಲಿ ಘಟಕದ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಪ್ರಕಾಶ್ ಸಿಕ್ಕೇರಾ, ಉಪಾಧ್ಯಕ್ಷರಾದ ಜಾರ್ಜ್ ಟಿ.ವಿ., ಸಬಿತಾ ಮಿಸ್ಕಿತ್, ಎಸ್ಸಿ/ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು, ಕೋಶಾಧಿಕಾರಿ ಮಹಮ್ಮದ್ ಬಪ್ಪಳಿಗೆ, ಮಾಜಿ ಕಾರ್ಪೊರೇಟರ್ ಅಬ್ದುಲ್ ರವೂಫ್ ಹಾಗೂ ಹಬೀಬುಲ್ಲಾ ಖಾಲಿದ್ ಪುಲಾಬೆ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









