ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಭಾಗಿಯಾಗಿದ್ದ ಬೃಹತ್ ಚಿನ್ನ ಕಳ್ಳಸಾಗಣೆ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಮಂಗಳೂರು ಪ್ರಾದೇಶಿಕ ಘಟಕ ಯಶಸ್ವಿಯಾಗಿ ಭೇದಿಸಿದೆ. ಈ ಕಾರ್ಯಾಚರಣೆಯಲ್ಲಿ ಅಂದಾಜು ₹2 ಕೋಟಿ ಮೌಲ್ಯದ 1.65 ಕೆ.ಜಿ ವಿದೇಶಿ ಚಿನ್ನ ಹಾಗೂ ₹73 ಲಕ್ಷ ನಗದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ದುಬೈ ಮತ್ತು ಕಾಸರಗೋಡಿನ ಕಳ್ಳಸಾಗಣೆದಾರರೊಂದಿಗೆ ಕೈಜೋಡಿಸಿ ವಿಮಾನ ನಿಲ್ದಾಣದ ಇಬ್ಬರು ಹೊರಗುತ್ತಿಗೆ ನೌಕರರು ಚಿನ್ನ ಸಾಗಾಟಕ್ಕೆ ನೆರವಾಗುತ್ತಿರುವ ಕುರಿತು ಖಚಿತ ಸುಳಿವು ಪಡೆದ ಡಿಆರ್ಐ ತಂಡ, ಆಗಮನ ವಿಭಾಗದಲ್ಲಿ ತೀವ್ರ ನಿಗಾ ವಹಿಸಿತ್ತು. ಯುಎಇಯಿಂದ ಬರುವ ಅಪರಿಚಿತ ಪ್ರಯಾಣಿಕರು ಇಮಿಗ್ರೇಷನ್ ಕೌಂಟರ್ ಸಮೀಪದ ಶೌಚಾಲಯದಲ್ಲಿ ಅಡಗಿಸಿಡುತ್ತಿದ್ದ ಚಿನ್ನವನ್ನು ಈ ಸಿಬ್ಬಂದಿ ಹೊರತೆಗೆದು ಹೊರಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ.
ನವೆಂಬರ್ 23ರಂದು ಬೆಳಿಗ್ಗೆ ಇಮಿಗ್ರೇಷನ್ ಕೌಂಟರ್ ಬಳಿಯ ಶೌಚಾಲಯದಿಂದ ಚಿನ್ನವನ್ನು ಹೊರತೆಗೆಯುತ್ತಿದ್ದ ಮಂಗಳೂರು ಮೂಲದ ಹೊರಗುತ್ತಿಗೆ ಸಿಬ್ಬಂದಿಯನ್ನು ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ. ಆತನ ವಶದಲ್ಲಿದ್ದ ಪೇಸ್ಟ್ ರೂಪದ ಚಿನ್ನ ತುಂಬಿದ್ದ ಎರಡು ಆಯತಾಕಾರದ ಬಾರ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ಡಿಆರ್ಐ ಉಪನಿರ್ದೇಶಕ ಕಂಕಣಾಲ ಅನಿಲ್ ಕುಮಾರ್ ನೀಡಿರುವ ಪ್ರಕಟಣೆಯಂತೆ, ಬಂಧಿತ ಆರೋಪಿಯು ಈ ಚಿನ್ನವನ್ನು ಕೇರಳದ ಕಾಸರಗೋಡು ಮೂಲದ ಮತ್ತೊಬ್ಬ ಸಿಬ್ಬಂದಿಗೆ ನೀಡಬೇಕಿತ್ತು. ಬಳಿಕ ಆತ ವಿಮಾನ ನಿಲ್ದಾಣದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಸ್ಥಳದಲ್ಲಿ ಕಾಸರಗೋಡಿನ ಮೂರನೇ ವ್ಯಕ್ತಿಗೆ ಅದನ್ನು ಹಸ್ತಾಂತರಿಸಲು ಸಂಚು ರೂಪಿಸಿದ್ದ.
ತಕ್ಷಣವೇ ಕಾರ್ಯಾಚರಣೆ ಮುಂದುವರಿಸಿದ ಅಧಿಕಾರಿಗಳು ಎರಡನೇ ಹಾಗೂ ಮೂರನೇ ಆರೋಪಿಗಳನ್ನು ಬಂಧಿಸಿದ್ದು, ತಪಾಸಣೆಯ ಸಂದರ್ಭದಲ್ಲಿ ಅಕ್ರಮ ವಹಿವಾಟಿಗೆ ಸಂಬಂಧಿಸಿದ ₹73 ಲಕ್ಷ ನಗದನ್ನು ಪತ್ತೆಹಚ್ಚಿದ್ದಾರೆ. ಒಟ್ಟಾರೆಯಾಗಿ ₹2 ಕೋಟಿ ಮೌಲ್ಯದ 1.65 ಕೆ.ಜಿ ಚಿನ್ನ, ನಗದು ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ಒಂದು ಕಾರು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಸೆರೆಸಿಕ್ಕ ಮೂವರು ಆರೋಪಿಗಳನ್ನು ಕಸ್ಟಮ್ಸ್ ಕಾಯ್ದೆ-1962ರ ಅಡಿಯಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 7, 2026ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಇದಕ್ಕೂ ಮುನ್ನ ನವೆಂಬರ್ 14ರಂದು ದುಬೈನಿಂದ ಮಂಗಳೂರಿಗೆ ಬಂದಿಳಿದ ಕಾಸರಗೋಡು ಮೂಲದ ಇಬ್ಬರು ಪ್ರಯಾಣಿಕರ ವಿರುದ್ಧವೂ ಇದೇ ಮಾದರಿಯ ಪ್ರಕರಣ ದಾಖಲಾಗಿತ್ತು. ಆರೋಪಿಗಳು ತಮ್ಮ ದೇಹದೊಳಗೆ (ಗುದನಾಳದಲ್ಲಿ) ಬಚ್ಚಿಟ್ಟುಕೊಂಡಿದ್ದ ಪೇಸ್ಟ್ ರೂಪದ ಚಿನ್ನದ ಐದು ಕ್ಯಾಪ್ಸೂಲ್ಗಳನ್ನು ಅಧಿಕಾರಿಗಳು ಹೊರತೆಗೆದಿದ್ದರು. ಇದರಿಂದ ಅಂದಾಜು ₹1.77 ಕೋಟಿ ಮೌಲ್ಯದ 1,306 ಗ್ರಾಂ ಶುದ್ಧ ಚಿನ್ನ ಲಭ್ಯವಾಗಿದ್ದು, ಕಸ್ಟಮ್ಸ್ ಕಾಯ್ದೆಯಡಿ ಇಬ್ಬರನ್ನೂ ಬಂಧಿಸಲಾಗಿತ್ತು.
ಇನ್ನೊಂದು ಪ್ರಮುಖ ಕಾರ್ಯಾಚರಣೆಯಲ್ಲಿ, ಡಿಆರ್ಐ ನೀಡಿದ ಗುಪ್ತಚರ ಮಾಹಿತಿಯ ಮೇರೆಗೆ ಮಂಗಳೂರು ಕಸ್ಟಮ್ಸ್ ಮತ್ತು ಡಿಆರ್ಐ ಅಧಿಕಾರಿಗಳು ಮಸ್ಕತ್ನಿಂದ ಆಗಮಿಸಿದ ಕಾಸರಗೋಡು ಮೂಲದ ಪ್ರಯಾಣಿಕನೊಬ್ಬನನ್ನು ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಆತನ ಬ್ಯಾಗ್ನಲ್ಲಿದ್ದ ಚಿಪ್ಸ್ ಪ್ಯಾಕೆಟ್ಗಳ ಒಳಗೆ ಅಡಗಿಸಿಡಲಾಗಿದ್ದ 1,333 ಗ್ರಾಂ ತೂಕದ ಹರಳಿನಂತಹ ವಸ್ತುವಿದ್ದ 14 ಪ್ಯಾಕೆಟ್ಗಳನ್ನು ವಶಕ್ಕೆ ಪಡೆಯಲಾಗಿದೆ.
ವೈಜ್ಞಾನಿಕ ಪರೀಕ್ಷೆ ನಡೆಸಿದಾಗ ಅದು ನಿಷೇಧಿತ ‘ಆಂಫೆಟಮೈನ್’ ಮಾದಕವಸ್ತು ಎಂಬುದು ದೃಢಪಟ್ಟಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಈ ಡ್ರಗ್ಸ್ ಹಸ್ತಾಂತರಿಸಿದ್ದ ಕೇರಳದ ಮುನ್ನಾರ್ ಮೂಲದ ವ್ಯಕ್ತಿಯನ್ನೂ ಬಂಧಿಸಿದ್ದು, ಇಬ್ಬರ ವಿರುದ್ಧ ಎನ್ಡಿಪಿಎಸ್ ಕಾಯ್ದೆ-1985ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಂಡ ಮೊದಲ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









