ಗೋಕರ್ಣ : ಉತ್ತರ ಕನ್ನಡದ ಗೋಕರ್ಣದ ಕಾಡಿನ ಮಧ್ಯ ಗುಹೆಯಲ್ಲಿ ಸಣ್ಣ ಸಣ್ಣ ಮಕ್ಕಳೊಂದಿಗೆ ವಾಸಿಸುತ್ತಿದ್ದ 40 ವರ್ಷದ ರಷ್ಯಾದ ಮಹಿಳೆಯನ್ನು ಗಸ್ತು ತಿರುಗುತ್ತಿದ್ದ ಗೋಕರ್ಣ ಪೊಲೀಸರು ರಕ್ಷಿಸಿದ್ದಾರೆ.
ಮೋಹಿ (40), ಅವರ ಪುಟ್ಟ ಮಕ್ಕಳಾದ ಪ್ರೆಯಾ (06) ಹಾಗೂ ಅಮಾ (4) ರಕ್ಷಿಸಲ್ಪಟ್ಟವರು.
ರಷ್ಯಾದಿಂದ ಗೋವಾಕ್ಕೆ ಬಂದಿದ್ದ ಈ ಮಹಿಳೆ ಗೋವಾ ಮೂಲಕ ಗೋಕರ್ಣಕ್ಕೆ ಬಂದು ಇಲ್ಲಿನ ದಟ್ಟ ಅರಣ್ಯವಾದ ರಾಮತೀರ್ಥ ಬಳಿಯ ಗುಹೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದಳು. ಅಲ್ಲಿಯೇ ಚಿಕ್ಕ ರುದ್ರನ ಮೂರ್ತಿ ಇಟ್ಟುಕೊಂಡು ಪೂಜಾ ಕಾರ್ಯ ಮಾಡುತ್ತಾ ದಿನ ಕಳೆಯುತಿದ್ದಳು.
ರಷ್ಯಾದ ಮೋಹಿಗೆ ಆಧ್ಯಾತ್ಮದ ಕಡೆ ಹೆಚ್ಚು ಆಸಕ್ತಿ ಇರುವುದರಿಂದ ಪ್ರಕೃತಿಯಲ್ಲಿ ಇರಬೇಕು ಎಂದು ತನ್ನ ಮಕ್ಕಳೊಂದಿಗೆ ಏಕಾಂಗಿಯಾಗಿ ಗುಹೆ ಸೇರಿದ್ದಳು. ಗುಡ್ಡ ಕುಸಿತವಾಗಿರುವ ರಾಮತೀರ್ಥ ಗುಡ್ಡದ ಗುಹೆಯಲ್ಲಿ ತಮ್ಮ ಪುಟ್ಟ ಮಕ್ಕಳೊಂದಿಗೆ ಕತ್ತಲಲ್ಲೇ ಬದುಕು ಕಳೆಯುತಿದ್ದಳು.
ಸಿಪಿಐ ಶ್ರೀಧರ್ ನೇತ್ರತ್ವದ ತಂಡ ಈ ಭಾಗದಲ್ಲಿ ಗುಡ್ಡ ಕುಸಿತವಾದ್ದರಿಂದ ಗಸ್ತು ತಿರುಗುವಾಗ ಗುಹೆಯಲ್ಲಿ ಯಾರೋ ವಾಸವಾಗಿರುವುದನ್ನು ಪತ್ತೆ ಮಾಡಿ ವಿದೇಶಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಭೂಕುಸಿತದ ಸಾಧ್ಯತೆ ಮತ್ತು ವನ್ಯಜೀವಿಗಳು ಮತ್ತು ಸರೀಸೃಪಗಳ ಸಂಚಾರ ಇರುವುದರಿಂದ ಸ್ಥಳವು ಸುರಕ್ಷಿತವಾಗಿಲ್ಲದ ಕಾರಣ ಮಕ್ಕಳೊಂದಿಗೆ ಹೊರಹೋಗುವಂತೆ ಪೊಲೀಸರು ಮಹಿಳೆಯ ಮನವೊಲಿಸಲು ಕಷ್ಟಪಟ್ಟರು.
ಆಕೆಯನ್ನು ಕುಮಟಾದ ಆಶ್ರಮಕ್ಕೆ ಕರೆದೊಯ್ಯಲಾಯಿತು. ಆಶ್ರಮವನ್ನು ತಲುಪಿದ ಪೊಲೀಸರು ಅನುಮಾನಗೊಂಡು ಆಕೆಯ ಪಾಸ್ಪೋರ್ಟ್ ಕೇಳಿದರು. ಹಲವು ನೆಪಗಳನ್ನು ಹೇಳಿದ ನಂತರ, ಆಕೆ ಅದನ್ನು ಕಳೆದುಕೊಂಡಿರುವುದಾಗಿ ಹೇಳಿದಳು.
ಪೊಲೀಸರು ಗುಹೆಯನ್ನು ಶೋಧಿಸಿದಾಗ ಪಾಸ್ಪೋರ್ಟ್ ಸಿಕ್ಕಿತು, ಆಕೆಯ ವೀಸಾ ಏಪ್ರಿಲ್ 17, 2017 ರಂದು ಅವಧಿ ಮೀರಿದೆ ಎಂದು ತಿಳಿದುಬಂದಿದೆ. ಮಹಿಳೆ ಮತ್ತು ಆಕೆಯ ಮಕ್ಕಳ ಸುರಕ್ಷತೆಗಾಗಿ, ಪೊಲೀಸರು ಆಕೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ದಾಖಲಿಸಿದ್ದಾರೆ.
ಪೊಲೀಸರು ಆಕೆಯನ್ನು ಜುಲೈ 9 ರಂದು ಆಕೆಯನ್ನು ಗುಹೆಯಲ್ಲಿ ಪತ್ತೆಹಚ್ಚಿಸಿದ್ದಾರೆ. ತನ್ನ ಮಕ್ಕಳೊಂದಿಗೆ ರಷ್ಯಾಗೆ ವಾಪಸ್ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ವಿಶೇಷ ಸುದ್ದಿಗಳು, ಸುದ್ದಿಗಳು









