ಮಂಗಳೂರು : ನ್ಯೂ ಶೈನ್ ಎಂಟರ್ಪ್ರೈಸಸ್ ಎಂಬ ಹೆಸರಿನಲ್ಲಿ ನಕಲಿ “ಲಕ್ಕಿ ಸ್ಕೀಮ್” ನಡೆಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 3,000ಕ್ಕೂ ಹೆಚ್ಚು ಜನರಿಗೆ 4.2 ಕೋಟಿ ರೂ. ಅಧಿಕ ವಂಚಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.
ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಆಯಿಷಾ ಕಟ್ಟಡದಲ್ಲಿ ನ್ಯೂ ಶೈನ್ ಎಂಟರ್ ಪ್ರೈಸಸ್ ಕಛೇರಿಯನ್ನು ಹೊಂದಿತ್ತು. ಈ ಕಂಪನಿಯನ್ನು ನಡೆಸುತ್ತಿದ್ದ ಆರೋಪಿಗಳು ಲಕ್ಕಿ ಡ್ರಾ ಮೂಲಕ ಐಷಾರಾಮಿ ಬಹುಮಾನಗಳನ್ನು ನೀಡುವುದಾಗಿ ಹೇಳಿ ಏಕಾಏಕಿಯಾಗಿ ಬಂದ್ ಮಾಡಿ ಸಾರ್ವಜನಿಕರಿಗೆ ಆಸೆ ಹುಟ್ಟಿಸಿ ವಂಚಿಸಿದ್ದಾರೆ.
ಲಕ್ಕಿ ಸ್ಕೀಮ್ ನ ಹೆಸರಿನಲ್ಲಿ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕು, ಪ್ಲಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದುಗಳನ್ನು ಲಕ್ಕಿ ಡ್ರಾ ನಲ್ಲಿ ಸಿಕ್ಕಿದವರಿಗೆ ಇವುಗಳನ್ನು ಕೊಡುವುದಾಗಿ ಆರೋಪಿಗಳು ತಿಳಿಸಿದ್ದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸುಮಾರು 4 ಕೋಟಿ 20 ಲಕ್ಷಕ್ಕೂ ಮೀರಿದ 3,000 ಜನರಿಗೆ ಲಕ್ಕಿ ಸ್ಕೀಮ್ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಹಾಗೂ ಸರಿಯಾದ ಬಹುಮಾನಗಳನ್ನು ನೀಡದೇ ಮತ್ತು ಎಲ್ಲರಿಗೂ ಹಣವನ್ನು ನೀಡುತ್ತೇವೆ ಎಂದು ಆಶ್ವಾಸನೆ ನೀಡಿ ಆರೋಪಿಗಳು ವಂಚಿಸಿದ್ದಾರೆ.
ಆರೋಪಿಗಳನ್ನು ಮಂಗಳೂರು ತಾಲೂಕಿನ ಸುರತ್ಕಲ್, ಕಾಟಿಪಳ್ಳ ನಿವಾಸಿಗಳಾದ ಅಹಮ್ಮದ್ ಖುರೇಶಿ(34), ನಝೀರ್ ಯಾನೆ ನಾಸೀರ್(39) ಎಂದು ಗುರುತಿಸಲಾಗಿದೆ.
ಆರೋಪಿಗಳ ವಿರುದ್ಧ ಮಂಗಳೂರು ತಾಲೂಕಿನ ಸುರತ್ಕಲ್, ಸೂರಿಂಜೆ ಗ್ರಾಮ ನಿವಾಸಿ ಶಿವ ಪ್ರಸಾದ್(38) ಅವರು ದೂರು ನೀಡಿದ್ದಾರೆ. ಇದೊಂದು ಅನಿಯಂತ್ರಿತ ಠೇವಣಿ ಯೋಜನೆ ಆಗಿದ್ದು ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕರಿಂದ ನ್ಯೂ ಶೈನ್ ಎಂಟರ್ ಪ್ರೈಸಸ್ ಹೆಸರಿನಲ್ಲಿ ಸುಮಾರು 4 ಕೋಟಿ 20 ಲಕ್ಷಕ್ಕಿಂತ ಅಧಿಕ ಹಣ ಸಂಗ್ರಹಣೆ ಮಾಡಿ ಆರೋಪಿಗಳು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿಗಳ ವಿರುದ್ಧ ನಂಬಿಕೆ ದ್ರೋಹ, ವಂಚನೆ ಮಾಡಿರುವ ಬಗ್ಗೆ ಆ.16ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ 107/2025 ಕಲಂ 316(2), 318(4) ಬಿ.ಎನ್.ಎಸ್ ಮತ್ತು ಕಲಂ 21 ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಹಮ್ಮದ್ ಖುರೇಶಿ ಹಾಗೂ ನಜೀರ್ ಯಾನೆ ನಾಸೀರ್ ರವರನ್ನು ಆ.19 ರಂದು ದಸ್ತಗಿರಿ ಮಾಡಿ ಅದೇ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣದ ತನಿಖೆಯ ಸಂಬಂಧ ಆರೋಪಿತರನ್ನು ಆ.25 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದು ತನಿಖೆಯನ್ನು ಮುಂದುವರೆಸಲಾಗುವುದು.
.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









