ಮಂಗಳೂರು : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರದಂದು ಕರಾವಳಿಯ ನಂಬಿಕೆಯ ಕೇಂದ್ರವಾದ ಕುತ್ತಾರು ಕೊರಗಜ್ಜನ ಆದಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಹಳ ಸಮಯದಿಂದ ಈ ದೈವಸ್ಥಳಕ್ಕೆ ಬರುವ ಇಚ್ಛೆ ಇತ್ತು. ಇಂದು ಕೊರಗಜ್ಜ ದೈವವೇ ತಮ್ಮನ್ನು ಇಲ್ಲಿಗೆ ಕರೆಸಿದೆ ಎಂದು ಅವರು ಭಕ್ತಿಯಿಂದ ನುಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ, “ದೇಶವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶವನ್ನು ರಕ್ಷಿಸಲು ಮತ್ತಷ್ಟು ಶಕ್ತಿ ನೀಡುವಂತೆ ದೈವದ ಬಳಿ ಪ್ರಾರ್ಥಿಸಿದ್ದೇನೆ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ, ಸಚಿವರು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಬಿಹಾರದ ಜನರು ನಿರೀಕ್ಷೆಗೂ ಮೀರಿ ತಮ್ಮ ಅಮೂಲ್ಯ ಮತಗಳ ಮೂಲಕ ಬಿಜೆಪಿಯನ್ನು ಆಶೀರ್ವದಿಸಿದ್ದಾರೆ. ಇದು ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರು ಜಗತ್ತಿನಾದ್ಯಂತ ಪ್ರಚಾರ ಮಾಡುತ್ತಿದ್ದ ಸುಳ್ಳಿಗೆ ದೊರೆತ ದೊಡ್ಡಮಟ್ಟದ ಸೋಲು ಎಂದು ಅವರು ಟೀಕಿಸಿದರು.
ಸಚಿವರ ಈ ಭೇಟಿಯ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಉಪಾಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪೈ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್ ಸೇರಿದಂತೆ ಜಿಲ್ಲಾ ಮತ್ತು ಮಂಡಲ ಮಟ್ಟದ ಹಲವು ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









