ಮಂಗಳೂರು : 2006ರಲ್ಲಿ ನಡೆದ ಸುಖಾನಂದ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ಆಶ್ರಯ ನೀಡಿದ್ದ, ಕಳೆದ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಹತ್ಯೆ ಪ್ರಕರಣವು 2006ರ ಡಿಸೆಂಬರ್ 1 ರಂದು ಸುರತ್ಕಲ್ ಪೊಲೀಸ್ ಠಾಣಾ ಸರಹದ್ದಿನ ಹೊಸಬೆಟ್ಟು ಬಳಿ ನಡೆದಿತ್ತು.
ಆರೋಪಿ ಕಬೀರ್ ಮತ್ತು ಆತನ ಸಹಚರರು ಸುಖಾನಂದ್ ಶೆಟ್ಟಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂದರ್ಭದಲ್ಲಿ ಪ್ರಮುಖ ಆರೋಪಿ ಕಬೀರ್ಗೆ ಅಬ್ದುಲ್ ಸಲಾಂ (47) ಅಡ್ಡೂರು ಮತ್ತು ಆತನ ಸಹೋದರ ಲತೀಫ್ ಅಡ್ಡೂರು ಲತೀಫ್ ಅವರು ಆಶ್ರಯ ನೀಡಿದ್ದರು. ಅವರು ಅಡ್ಡೂರ್ ಟಿಬೇಟ್ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಕಬೀರ್ನನ್ನು ಎರಡು ದಿನಗಳ ಕಾಲ ಇರಿಸಿಕೊಂಡು, ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು. ನಂತರ ಕಬೀರ್ನನ್ನು ವಾಹನದಲ್ಲಿ ಕೇರಳದ ಕಾಸರಗೋಡು ಬಳಿ ಬಿಟ್ಟು ಸಹೋದರರು ತಲೆಮರೆಸಿಕೊಂಡಿದ್ದರು.
ಬಂಧಿತ ಆರೋಪಿ ಅಬ್ದುಲ್ ಸಲಾಂ ಕೃತ್ಯ ನಡೆದ ಕೇವಲ ಮೂರು ತಿಂಗಳ ನಂತರ ವಿದೇಶಕ್ಕೆ ತೆರಳಿದ್ದನು. ಅಲ್ಲಿಂದಲೇ 19 ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಬೀಳದೆ, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಆರೋಪಿಯು ದಸ್ತಗಿರಿಯಾಗದೇ ಇದ್ದುದರಿಂದ ಆತನ ಮೇಲೆ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು ಮತ್ತು ನ್ಯಾಯಾಲಯದಿಂದ ಹಲವಾರು ಬಾರಿ ವಾರಂಟ್ಗಳನ್ನು ಸಹ ಹೊರಡಿಸಲಾಗಿತ್ತು.
ಇತ್ತೀಚೆಗೆ ವಿದೇಶದಿಂದ ವಾಪಸ್ಸಾದ ಅಬ್ದುಲ್ ಸಲಾಂ, ಬಜಪೆ ಕಿನ್ನಿಪದವಿನ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದನು. ಈತನ ಸಹೋದರ ಲತೀಫ್ ಅಡ್ಡೂರು ಲತೀಫ್ ಇನ್ನೂ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಮಾಹಿತಿ ಕಲೆ ಹಾಕಿ ನವೆಂಬರ್ 18 ರಂದು ಸಂಜೆ 8 ಗಂಟೆಗೆ ಬಜಪೆಯ ಕಿನ್ನಿಪದವು ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆ 16 ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ 11 ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಅಬ್ದುಲ್ ಸಲಾಂ ಮೇಲೆ ಬಜಪೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ರೌಡಿ ಹಾಳೆಯನ್ನೂ ಸಹ ತೆರೆಯಲಾಗಿದೆ. 19 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದ ಕಾರಣ ಈತನ ವಿರುದ್ಧ ಠಾಣೆಯಲ್ಲಿ ಕಲಂ 209 ಬಿಎನ್.ಎಸ್ ರಂತೆ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸಹಾಯಕ ಪೊಲೀಸ್ ಆಯುಕ್ತರು (ಉತ್ತರ ಉಪ ವಿಭಾಗ) ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









