ಉಳ್ಳಾಲ : ಹಿರಿಯ ರಾಜಕೀಯ ನಾಯಕಿಯಾಗಿ, ಬಿಜೆಪಿ ಪಕ್ಷಕ್ಕೆ ಸುದೀರ್ಘ ಸೇವೆ ಸಲ್ಲಿಸಿದ ಲಲಿತಾ ಸುಂದರ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾಗಿದ್ದಾರೆ. ತೊಕ್ಕೊಟ್ಟಿನ ತಮ್ಮ ಸ್ವಗೃಹದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಲಲಿತಾ ಸುಂದರ್ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಅವರು ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ್ದು, ಉಳ್ಳಾಲ ನಗರಸಭೆಯ ಮಾಜಿ ಸದಸ್ಯರಾಗಿ ಚುನಾಯಿತ ಮತ್ತು ನಾಮನಿರ್ದೇಶಿತ ಸ್ಥಾನಗಳೆರಡರಲ್ಲೂ ಸೇವೆ ಸಲ್ಲಿಸಿದ್ದರು. ಪಕ್ಷದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು.
ರಾಜಕೀಯದ ಹೊರತಾಗಿ, ಅವರು ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ತೊಕ್ಕೊಟ್ಟು ಹಳೇ ಚೆಕ್ ಪೋಸ್ಟ್ ಬಳಿಯ ಸ್ವಾಮಿ ಕೊರಗಜ್ಜ ಸೇವಾ ಸಮಿತಿ, ಕೊಲ್ಯ ಶ್ರೀ ಶಾರದೋತ್ಸವ ಸಮಿತಿ, ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿ ವಿನಾಯಕ ಮಂದಿರ ಮತ್ತು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ಅವರು ತಮ್ಮ ಸಕ್ರಿಯ ಸೇವೆಯನ್ನು ಸಲ್ಲಿಸಿದ್ದರು.
ಮೃತರು ತಮ್ಮ ಸೊಸೆ, ಮೊಮ್ಮಗಳು ಹಾಗೂ ಅಪಾರ ಸಂಖ್ಯೆಯ ಬಂಧುಬಳಗ ಮತ್ತು ಬಿಜೆಪಿ ಕಾರ್ಯಕರ್ತರನ್ನು ಅಗಲಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









