ಬೆಳ್ತಂಗಡಿ : ಭಾರಿ ಚರ್ಚೆಗೆ ಗ್ರಾಸವಾಗಿದ್ದ ಧರ್ಮಸ್ಥಳ ಶವಹೂತ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಮಹತ್ವದ ತನಿಖಾ ವರದಿಯನ್ನು ಸಲ್ಲಿಸಿದೆ.
ಎಸ್ಐಟಿ ಅಧಿಕಾರಿಗಳು ಆರಂಭದ ದೂರುದಾರ ಚಿನ್ನಯ್ಯ (ಪ್ರಸ್ತುತ ಜೈಲಿನಲ್ಲಿದ್ದಾರೆ) ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ‘ಸುಳ್ಳು ಸಾಕ್ಷಿ’ ನೀಡಿದ ಆರೋಪದ ಮೇಲೆ ಸೆಕ್ಷನ್ 215 ಅಡಿಯಲ್ಲಿ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಆರೋಪಿಗಳ ಪಟ್ಟಿಯಲ್ಲಿ ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ್ ಗೌಡ, ಮತ್ತು ಸುಜಾತ ಭಟ್ ಸಹ ಸೇರಿದ್ದಾರೆ.
ಈ ವರದಿಯು ಬರೋಬ್ಬರಿ 3,923 ಪುಟಗಳನ್ನು ಒಳಗೊಂಡಿದೆ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದ ತಂಡವು ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ ಎಚ್.ಟಿ ಅವರಿಗೆ ಮಧ್ಯಾಹ್ನ 3:15 ಕ್ಕೆ ಇದನ್ನು ಸಲ್ಲಿಸಿದೆ.
ವರದಿಯಲ್ಲಿ, ಐದು ಮಂದಿ ಆರೋಪಿಗಳು ತನಿಖೆಗೆ ಸಮರ್ಪಕವಾಗಿ ಸಹಕರಿಸುತ್ತಿಲ್ಲ ಎಂಬ ಅಂಶವನ್ನು ಅಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಸಲ್ಲಿಕೆಯಾಗಿರುವ ವರದಿಯ ಆಧಾರದಲ್ಲಿ ಮುಂದಿನ ತನಿಖೆಯ ದಿಕ್ಕನ್ನು ನ್ಯಾಯಾಲಯವೇ ಸೂಚಿಸಬೇಕು ಎಂದು ಎಸ್ಐಟಿ ಮನವಿ ಮಾಡಿದೆ. ಅಂತಿಮವಾಗಿ, ಸಂಪೂರ್ಣ ತನಿಖೆ ಮುಗಿದ ನಂತರ ಅಂತಿಮ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









