ಮಂಗಳೂರು : ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ವಹಿವಾಟು 2020-21ನೇ ಸಾಲಿನ 2,134.15 ಕೋಟಿ ರೂ.ಗಳಿಂದ 2024-2025ನೇ ಸಾಲಿನಲ್ಲಿ 3,631,00 ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಐದು ವರ್ಷಗಳಲ್ಲಿ ಶೇ.70ರಷ್ಟು ವಹಿವಾಟು ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕ್ಯಾಂಪ್ಕೋ ನಿರ್ಗಮನ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಮಂಗಳೂರಿನ ಕ್ಯಾಂಪ್ಕೋ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಆಡಳಿತಾವಧಿಯ ಸಾಧನೆಯ ಮಾಹಿತಿ ನೀಡಿದರು.
ಐದು ವರ್ಷದ ಹಿಂದೆ 2,134.15 ಕೋಟಿ ರೂ. ಇದ್ದ ವಹಿವಾಟು ಈಗ 3,631.91 ಕೋಟಿ ರೂ. ತಲುಪಿದೆ. ಅಂದು 10,002.33 ಕೋಟಿ ರೂ. ಇದ್ದ ಲಾಭ ಈಗ 4,665.04 ಕೋಟಿ ರೂ.ಗೆ ಏರಿಕೆಯಾಗಿದೆ. ಐದು ವರ್ಷಗಳ ಅವಧಿಯಲ್ಲಿ ಎರಡು ವರ್ಷ ಹೊರತುಪಡಿಸಿದರೆ ಮೂರು ವರ್ಷ ಲಾಭಾಂಶ ನೀಡಲಾಗಿದೆ ಎಂದರು.
ಐದು ವರ್ಷ ಹಿಂದೆ ಹೊಸ ಅಡಕೆ ಕೇಜಿಗೆ 240- 320 ರೂ. ಇತ್ತು, ಈಗ 360-485 ರೂ. ಇದೆ. ಚಾಲಿ ಅಡಕೆಗೆ 320-380 ರೂ. ಇತ್ತು. ಪ್ರಸಕ್ತ 360-525 ರೂ. ತಲುಪಿದೆ. ಕೆಂಪು ಅಡಕೆಗೆ 350-398 ರೂ.ನಿಂದ ಈಗ 545-585 ರೂ. ಗೆ ಏರಿಕೆಯಾಗಿದೆ. ಕೊರೋನಾ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಅಡಕೆ ಧಾರಣೆ ಕುಸಿತ ಕಂಡಾಗ ಬೆಳೆಗಾರರ ಹಿತರಕ್ಷಕನಾಗಿ ಕ್ಯಾಂಪ್ಕೋ ಧಾರಣೆ ಸ್ಥಿರತೆಗೆ ಕ್ರಮ ಕೈಗೊಂಡಿದೆ ಎಂದರು.
ಕರಾವಳಿ ಹಾಗೂ ಮಲೆನಾಡು ಅಡಕೆ ತೋಟಗಳಲ್ಲಿ ಕಂಡುಬಂದಿರುವ ಹಳದಿ ಎಲೆ ರೋಗಕ್ಕೆ ಪರಿಹಾರೋಪಾಯ ಹಾಗೂ ಸಂತ್ರಸ್ತ ಬೆಳೆಗಾರರಿಗೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ಬೆಳೆ ಬೆಳೆಸಲು ಪ್ರೋತ್ಸಾಹ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿಕೊಳ್ಳಲಾಗಿದೆ. ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಈ ವಿಚಾರವನ್ನು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದಾರೆ. ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಶೀಘ್ರವೇ ಕರಾವಳಿ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವ ನಿರೀಕ್ಷೆ ಇದೆ ಎಂದರು.
ಅಡಕೆಯನ್ನು ಕ್ಯಾನ್ಸರ್ಕಾರಕ ಎಂದು ವರ್ಗೀಕರಿಸಿರುವುದನ್ನು ತೆಗೆದು ಹಾಕುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಐಎಆರ್ಸಿಗೆ ಮನವಿ ಸಲ್ಲಿಸಲಾಗಿದೆ. ಅಡಕೆ ಕ್ಯಾನ್ಸರ್ಕಾರಕ ಅಲ್ಲ ಎಂಬುದನ್ನು ಸಾಬೀತುಪಡಿಸುವ ಸಲುವಾಗಿ ಕೇಂದ್ರ ಸ್ವಾಮ್ಯದ ಐಸಿಎಆರ್-ಸಿಪಿಸಿಆರ್ಐ ನೇತೃತ್ವದಲ್ಲಿ ವೈದ್ಯಕೀಯ ಸಂಶೋಧನೆಗಳು ನಡೆಯುತ್ತಿವೆ. ಆದಷ್ಟು ಶೀಘ್ರ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಕೂಡ ಸೂಚನೆ ನೀಡಿದೆ ಎಂದರು.
ಕ್ಯಾಂಪ್ಕೋದಿಂದ ಮಾಲ್ಡೀವ್ಸ್ಗೆ ಅಡಕೆ ರಫ್ತುಗೊಳ್ಳುತ್ತಿದೆ. ಅಲ್ಲದೆ ಮೋರಾ ಅಡಕೆ ಅಮೆರಿಕ ಮತ್ತು ಇಂಗ್ಲೆಂಡ್ಗಳಿಗೆ ರಫ್ತಾಗುತ್ತಿದೆ. ಸೌಗಂಧ್ ಹೆಸರಿನ ಕಾಜು ಸುಪಾರಿಯನ್ನು ಮಾರುಕಟ್ಟೆಗೆ ಮರು ಬಿಡುಗಡೆ ಮಾಡಲಾಗಿದೆ. ಕಾಲಾ ಸೋನಾ ಹೆಸರಿನಲ್ಲಿ ಪೆಪ್ಪರ್ ಸ್ಯಾಚೆಟ್ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ ಎಂದರು.
ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ, ನಿರ್ದೇಶಕರಾದ ಎಸ್.ಆರ್.ಸತೀಶ್ಟಂದ್ರ, ದಯಾನಂದ ಹೆಗ್ಡೆ, ಸುರೇಶ್ ಶೆಟ್ಟಿ, ಕೃಷ್ಣ ಪ್ರಸಾದ್ ಮಡ್ತಿಲ, ಬಾಲಕೃಷ್ಣ ರೈ, ದಯಾನಂದ ಹೆಗ್ಡೆ, ರಾಧಾಕೃಷ್ಣ, ಸತ್ಯನಾರಾಯಣ ಪ್ರಸಾದ್, ರಾಘವೇಂದ್ರ, ಡಾ.ಜಯಪ್ರಕಾಶ್, ರಾಘವೇಂದ್ರ ಭಟ್ ಪುತ್ತೂರು, ಎಂಡಿ ಡಾ.ಸತ್ಯನಾರಾಯಣ, ಜನರಲ್ ಮ್ಯಾನೇಜರ್ ರೇಷ್ಮಾ ಮಲ್ಯ, ಅಡಕೆ ಸಂಶೋಧನಾ ಪ್ರತಿಷ್ಠಾನ ಅಧಿಕಾರಿ ಡಾ.ಕೇಶವ ಭಟ್ ಮತ್ತಿತರರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









