ಬಂಟ್ವಾಳ : ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾತಬೆಟ್ಟು ಕಟ್ಟೆಮನೆ ಎಂಬಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಂಗಳೂರಿನ ಡಿಸಿಆರ್ ಇ (DCRE) ವಿಭಾಗದಲ್ಲಿ ಕರ್ತವ್ಯದಲ್ಲಿರುವ ಪ್ರಸನ್ನ ಎಂಬವರು ಚಲಾಯಿಸುತ್ತಿದ್ದ ನ್ಯಾನೋ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಮಾರ್ನಬೈಲು ನಿವಾಸಿ ‘ಇಮ್ರಾನ್ ಮೊಹಮ್ಮದ್ ತಾಹ’ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಸವಾರ ಕಾರಿನ ಮುಂಭಾಗದ ಗ್ಲಾಸಿಗೆ ಅಪ್ಪಳಿಸಿ ಹೊರಕ್ಕೆ ಎಸೆಯಲ್ಪಟ್ಟಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದು ಕಾಲು ತುಂಡಾಗಿದೆ.
ಮದ್ಯಪಾನದ ಆರೋಪ ಮತ್ತು ವಿಡಿಯೋ ವೈರಲ್: ಅಪಘಾತದ ಬೆನ್ನಲ್ಲೇ ಕಾರು ಚಾಲಕ ಪ್ರಸನ್ನ ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ. ಈ ವೇಳೆ ಸ್ಥಳೀಯರು ಕಾರನ್ನು ಪರಿಶೀಲಿಸಿದಾಗ ಒಳಗಡೆ ಪೊಲೀಸರು ಬಳಸುವ ಟೋಪಿ ಹಾಗೂ ಶೇಂದಿ ತುಂಬಿದ್ದ ಬಾಟಲಿ ಪತ್ತೆಯಾಗಿದೆ. ಮಹಿಳೆಯೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪೊಲೀಸ್ ಸಿಬ್ಬಂದಿ ಕುಡಿದು ವಾಹನ ಚಲಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತಪಾಸಣೆ ಮತ್ತು ತನಿಖೆ: ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣ್ ಅವರು ತಕ್ಷಣದ ತನಿಖೆಗೆ ಸೂಚಿಸಿದ್ದಾರೆ. ಸಾರ್ವಜನಿಕರ ಹಾಗೂ ಮೃತರ ಸಂಬಂಧಿಕರ ಸಮ್ಮುಖದಲ್ಲೇ ಪೊಲೀಸ್ ಸಿಬ್ಬಂದಿ ಪ್ರಸನ್ನ ಅವರನ್ನು ‘ಆಲ್ಕೋ ಮೀಟರ್’ ಪರೀಕ್ಷೆಗೆ ಒಳಪಡಿಸಲಾಗಿದ್ದು, ಫಲಿತಾಂಶ ‘ನೆಗೆಟಿವ್’ ಬಂದಿದೆ. ಆದರೂ ನಿಖರತೆಗಾಗಿ ರಕ್ತದ ಮಾದರಿ ಪರೀಕ್ಷೆ ನಡೆಸುವಂತೆಯೂ ಎಸ್ಪಿ ಸೂಚನೆ ನೀಡಿದ್ದಾರೆ. ಸದ್ಯ ‘ಪುಂಜಾಲಕಟ್ಟೆ ಪೊಲೀಸ್ ಠಾಣೆ’ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









