ಮಂಗಳೂರು : ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಖ್ಯಾತ ಶಿಕ್ಷಣ ತಜ್ಞರಾದ ಡಾ. ಎನ್. ವಿನಯ ಹೆಗ್ಡೆ (86) ಅವರು ಜನವರಿ 1, 2026ರ ಗುರುವಾರ ನಸುಕಿನ ಜಾವ ಮಂಗಳೂರಿನ ಶಿವಭಾಗ್ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮಾಜಿ ಲೋಕಸಭಾ ಸ್ಪೀಕರ್ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರ ಪುತ್ರರಾದ ಇವರು, 1939 ರಲ್ಲಿ ಜನಿಸಿ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿದ್ದರು. ನಿವೃತ್ತ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಇವರ ಕಿರಿಯ ಸಹೋದರರು.
ಕೈಗಾರಿಕಾ ಕ್ಷೇತ್ರದಲ್ಲಿನ ಸಾಧನೆ: ವಿನಯ ಹೆಗ್ಡೆಯವರು ಕೇವಲ ಶಿಕ್ಷಣಕ್ಕೆ ಸೀಮಿತವಾಗದೆ, 1975ರಲ್ಲಿ ‘ಲೆಮಿನಾ ಸಸ್ಪೆನ್ಷನ್ ಪ್ರೈವೇಟ್ ಲಿಮಿಟೆಡ್’ ಎಂಬ ಕೈಗಾರಿಕೆಯನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಆಟೋಮೊಬೈಲ್ ಬಿಡಿಭಾಗಗಳ ರಫ್ತಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಈ ಸಂಸ್ಥೆಯು ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಹತ್ತು ವರ್ಷಗಳ ಹಿಂದೆಯೇ ಇವರ ಉದ್ಯಮದ ವಹಿವಾಟು ನೂರು ಕೋಟಿ ರೂಪಾಯಿಗಳ ಗಡಿ ದಾಟಿತ್ತು.
ಶಿಕ್ಷಣ ಕಾಶಿ ‘ನಿಟ್ಟೆ’ಯ ಉದಯ: ತಮ್ಮ ಹುಟ್ಟೂರು ಕಾರ್ಕಳದ ನಿಟ್ಟೆ ಗ್ರಾಮವನ್ನು ಶೈಕ್ಷಣಿಕ ಕೇಂದ್ರವನ್ನಾಗಿ ಮಾಡುವ ತಂದೆಯವರ ಕನಸನ್ನು ನನಸು ಮಾಡಲು 1979ರಲ್ಲಿ ನಿಟ್ಟೆ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿದರು. ಇಂದು ಮಂಗಳೂರು ಮತ್ತು ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಇವರ ಶ್ರಮದಿಂದ ತಲೆ ಎತ್ತಿವೆ. ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಿಟ್ಟೆ ವಿವಿಯು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಸೇವೆ ಮತ್ತು ಗೌರವಗಳು: ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ನೀಡಲು ಕೆ.ಎಸ್. ಹೆಗ್ಡೆ ಆಸ್ಪತ್ರೆಯನ್ನು ಸ್ಥಾಪಿಸಿದ ಇವರು, ದಾನಚಿಂತಕರಾಗಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದರು. ಇವರ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿವೆ.
ಅಂತಿಮ ನಮನ: ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿರುವ ಹೆಗ್ಡೆಯವರ ಪಾರ್ಥಿವ ಶರೀರವನ್ನು ಇಂದು ಮಂಗಳೂರು ಮತ್ತು ನಿಟ್ಟೆ ಕ್ಯಾಂಪಸ್ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಇಂದು ಸಂಜೆ 6 ಗಂಟೆಗೆ ಕಾರ್ಕಳದ ನಿಟ್ಟೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









