ಕುಂದಾಪುರ : ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿನಿಂದ ಸಂಭವಿಸುತ್ತಿದ್ದ ಮಂಗಗಳ ಸರಣಿ ಸಾವಿನಿಂದ ಉಂಟಾಗಿದ್ದ ಮಂಗನಕಾಯಿಲೆ (ಕೆಎಫ್ಡಿ) ಭೀತಿ ಈಗ ದೂರವಾಗಿದೆ. ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ಮಂಗಗಳ ಮಾದರಿ ಹಾಗೂ ಮಲದ ಸ್ಯಾಂಪಲ್ಗಳ ವರದಿ ನೆಗೆಟಿವ್ ಬಂದಿದ್ದು, ಮಂಗಗಳ ಸಾವಿಗೆ ಮಂಕಿ ಫೀವರ್ ಕಾರಣವಲ್ಲ ಎಂಬುದು ಆರೋಗ್ಯ ಇಲಾಖೆಯಿಂದ ದೃಢಪಟ್ಟಿದೆ. ಇದರಿಂದಾಗಿ ಮಲೆನಾಡು ಹಾಗೂ ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮಗಳ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಡಿಸೆಂಬರ್ ಮಧ್ಯಭಾಗದಲ್ಲಿ ಹೊಸಂಗಡಿಯ ಕಾರೂರು ಹಾಗೂ ಮಡಾಮಕ್ಕಿಯ ಮಾರ್ಮಣ್ಣು ಎಂಬಲ್ಲಿ ಮಂಗಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ನೆರೆಯ ಶಿವಮೊಗ್ಗ ಜಿಲ್ಲೆಯಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದರಿಂದ ಉಡುಪಿ ಜಿಲ್ಲೆಯಲ್ಲೂ ತೀವ್ರ ಆತಂಕ ಮನೆಮಾಡಿತ್ತು. ಆರೋಗ್ಯ ಇಲಾಖೆಯು ಮೃತ ಮಂಗಗಳ ಅಂಗಾಂಗಗಳ ಪರೀಕ್ಷೆ ನಡೆಸಿದಾಗ ಕಾಯಿಲೆಯ ಲಕ್ಷಣಗಳು ಕಂಡುಬಂದಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಬಾಧಿತ ಪ್ರದೇಶಗಳಲ್ಲಿ ಡಿಎಂಪಿ ಎಣ್ಣೆಯನ್ನು ವಿತರಿಸಲಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿದಿದೆ.
ಇನ್ನೊಂದೆಡೆ, ಮಂಗನಕಾಯಿಲೆ ಅಲ್ಲದಿದ್ದರೆ ಸಾವು ಸಂಭವಿಸಲು ಕಾರಣವೇನು ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಕೃಷಿ ಬೆಳೆಗಳ ರಕ್ಷಣೆಗಾಗಿ ಯಾರಾದರೂ ವಿಷವಿಟ್ಟಿರುವ ಸಾಧ್ಯತೆಯೂ ಇರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಮಂಗಗಳು ಮೃತಪಟ್ಟಿರುವುದು ಕಂಡುಬಂದಲ್ಲಿ ಜನರು ಆತಂಕಕ್ಕೊಳಗಾಗದೆ ತಕ್ಷಣ ಅರಣ್ಯ ಅಥವಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









