ಮಂಗಳೂರು: ಆರೋಪಿ ಕೃಷ್ಣ ಜೆ. ರಾವ್ ಕುಟುಂಬ ಮದುವೆಗೆ ಒಪ್ಪಿ ಕಾಲಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ಜನವರಿ 31 ಕೊನೆಯ ದಿನಾಂಕ, ಈ ಹಿಂದೆ ಜನವರಿ 24ಕ್ಕೆ ನಿಗದಿಯಾಗಿದ್ದ ಮಗುವಿನ ನಾಮಕರಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಒಂದು ವೇಳೆ ನಿಗದಿತ ದಿನಾಂಕದೊಳಗೆ ಮದುವೆ ನಡೆಯದಿದ್ದರೆ, ಫೆಬ್ರವರಿ 7ರಂದು ಅದ್ಧೂರಿಯಾಗಿ ನಾಮಕರಣ ನೆರವೇರಿಸಿ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಾ ಕುಳಾಯಿ ಎಚ್ಚರಿಸಿದ್ದಾರೆ.
ಸಂಧಾನಕ್ಕೆ ಸಂತ್ರಸ್ತ ನಮಿತಾ ಮತ್ತು ಆಕೆಯ ಮಗಳು ಮಾತ್ರ ಬರಬೇಕು ಎಂಬ ಷರತ್ತನ್ನು ಎದುರು ಪಕ್ಷದವರು ವಿಧಿಸಿದ್ದಾರೆ. ಆದರೆ, ಸಂತ್ರಸ್ತೆಯ ಕುಟುಂಬದವರ ಸುರಕ್ಷತೆಯ ದೃಷ್ಟಿಯಿಂದ ಈ ಷರತ್ತನ್ನು ತಿರಸ್ಕರಿಸಲಾಗಿದೆ. ಸಂಧಾನ ಪ್ರಕ್ರಿಯೆಯು ಪುತ್ತೂರು ಪೊಲೀಸ್ ಠಾಣೆಯಲ್ಲಿ ಅಥವಾ ಮಂಗಳೂರು ಎಸ್ಪಿ ಸಮ್ಮುಖದಲ್ಲೇ ನಡೆಯಬೇಕು. ಯಾವುದೇ ಕಾರಣಕ್ಕೂ ಸಂತ್ರಸ್ತೆಯನ್ನು ಏಕಾಂಗಿಯಾಗಿ ಕಳುಹಿಸುವುದಿಲ್ಲ ಎಂದು ಪ್ರತಿಭಾ ಕುಳಾಯಿ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಮಗುವನ್ನು ಆಶ್ರಮಕ್ಕೆ ನೀಡುವಂತೆ ಹಾಗೂ ಮದುವೆಯ ಬೆನ್ನಲ್ಲೇ ವಿಚ್ಛೇದನ ಪಡೆಯುವಂತೆ ಒತ್ತಡ ಹೇರಲಾಗಿತ್ತು ಎಂದು ಆರೋಪಿಸಿರುವ ಪ್ರತಿಭಾ ಅವರು, ಪ್ರಸ್ತುತ ಮದುವೆಗೆ ಒಪ್ಪಿರುವುದು ಕೇವಲ ಕೋರ್ಟ್ ಕೇಸಿನಿಂದ ಪಾರಾಗಲು ನಡೆಸುತ್ತಿರುವ ನಾಟಕವಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಮದುವೆಯು ಆನ್ಲೈನ್ ಮೂಲಕ ಅಥವಾ ಕಾನೂನುಬದ್ಧವಾಗಿ ಯಾವುದೇ ರೀತಿಯಲ್ಲಾದರೂ ನಡೆಯಲಿ, ಆದರೆ ಇಬ್ಬರ ತಪ್ಪಿಗೂ ಪ್ರಾಯಶ್ಚಿತವಾಗಬೇಕು ಮತ್ತು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಬೇಕು ಎಂಬುದು ಅವರ ಆಗ್ರಹವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









