ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಳಾರಗೋಳಿಯಲ್ಲಿ ಜನವರಿ 20ರ ತಡರಾತ್ರಿ ಸ್ಥಳೀಯ ನಿವಾಸಿ ದೇವಿ ಪ್ರಸಾದ್ ಎಂಬುವವರ ಬೈಕ್ ಕಳ್ಳತನಕ್ಕೆ ಯತ್ನಿಸಿದ ಆರೋಪದ ಮೇಲೆ ಮಂಗಳೂರಿನ ಕುಳೂರು ಮೂಲದ ಮೋಯಿದ್ದಿನ್ ನಾಸೀರ್ ಹಾಗೂ ಅಬ್ದುಲ್ ಸಮದ್ ಎಂಬುವವರನ್ನು ಸಾರ್ವಜನಿಕರು ಹಿಡಿದು ಬೆಂಡೆತ್ತಿದ್ದಾರೆ. ಬೈಕ್ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಸ್ಥಳೀಯರು ಬೆನ್ನಟ್ಟಿದಾಗ, ಆರೋಪಿಗಳು ತಪ್ಪಿಸಿಕೊಳ್ಳುವ ಭರದಲ್ಲಿ ಸಾರ್ವಜನಿಕರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಇಬ್ಬರನ್ನೂ ಹಿಡಿದು ಮರಕ್ಕೆ ಕಟ್ಟಿ ಹಾಕಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ವೇಣೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಿಕೊಂಡಿದ್ದಾರೆ. ಬೈಕ್ ಕಳ್ಳತನಕ್ಕೆ ಯತ್ನಿಸಿದ ಅಬ್ದುಲ್ ಸಮದ್ ಮತ್ತು ಮೊಯಿದ್ದಿನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಹಾಗೂ 307 ಅಡಿ ಕೇಸ್ ದಾಖಲಾಗಿದ್ದರೆ, ಇನ್ನೊಂದೆಡೆ ಕಾನೂನನ್ನು ಕೈಗೆತ್ತಿಕೊಂಡು ಆರೋಪಿಗಳ ಮೇಲೆ ಹಲ್ಲೆ ನಡೆಸಿದ ದೂರಿನನ್ವಯ ಬಾಚು, ನಿಶೀತ್, ನರೇಶ್ ಅಂಚನ್, ರತ್ನಾಕರ, ಸಸ್ತಿಕ್, ದೇವಿಪ್ರಸಾದ್, ಸುಧೀರ್ ಮತ್ತು ಚಂದಪ್ಪ ಎಂಬ ಎಂಟು ಜನರ ವಿರುದ್ಧ BNS ಕಲಂ 189(2), 191(2), 191(3), 352, 115(2), 118(1), 351(2) ಹಾಗೂ 190 ಅಡಿ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಅಪರಾಧ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









