ಮಂಗಳೂರು : ನಗರದ ಕದ್ರಿಯ ಕೆ.ಪಿ.ಟಿ. ಮೈದಾನದಲ್ಲಿ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟವನ್ನು ಅತ್ಯಂತ ಸಂಭ್ರಮದಿಂದ ಆಯೋಜಿಸಲಾಗಿತ್ತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು, ಪೋಲೀಸರು ಮತ್ತು ಪತ್ರಕರ್ತರು ಸಮಾಜದ ಪ್ರಮುಖ ಅಂಗಗಳಾಗಿದ್ದು, ಇಬ್ಬರೂ ನಿರಂತರವಾಗಿ ಮಾನಸಿಕ ಹಾಗೂ ದೈಹಿಕ ಒತ್ತಡದ ನಡುವೆ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮನಸ್ಸಿಗೆ ಉಲ್ಲಾಸ ನೀಡುವುದಲ್ಲದೆ, ದಿನನಿತ್ಯದ ಒತ್ತಡವನ್ನು ನಿವಾರಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕ್ರೀಡೆಗಳು ವೈಯಕ್ತಿಕ ಆರೋಗ್ಯ ಸುಧಾರಣೆಯ ಜೊತೆಗೆ ವೃತ್ತಿಬಾಂದವ್ಯವನ್ನು ವೃದ್ಧಿಸುತ್ತವೆ ಎಂದು ಅವರು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆ.ಪಿ.ಟಿ. ಕಾಲೇಜಿನ ಪ್ರಾಂಶುಪಾಲರಾದ ಹರೀಶ್ ಶೆಟ್ಟಿ ಅವರು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮವನ್ನು ನಿರೂಪಿಸಿದರೆ, ಹರೀಶ್ ಮೋಟುಕಾನ ವಂದನಾರ್ಪಣೆ ಮಾಡಿದರು. ಕ್ರೀಡಾಕೂಟದ ಅಂಗವಾಗಿ ಓಟ, ಮನರಂಜನಾ ಆಟಗಳು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕ್ರೀಡಾಕೂಟದ ಕೇಂದ್ರ ಬಿಂದುವಾಗಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಪತ್ರಕರ್ತರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಪುರುಷರ ಕ್ರಿಕೆಟ್ ವಿಭಾಗದಲ್ಲಿ ಒಟ್ಟು 10 ತಂಡಗಳು ಸೆಣಸಾಡಿದ್ದು, ಅಂತಿಮವಾಗಿ ‘ವಾರ್ತಾಭಾರತಿ ಬಿ’ ತಂಡವು ಪ್ರಥಮ ಸ್ಥಾನ ಗಳಿಸಿ ವಿಜೇತರಾಗಿ ಹೊರಹೊಮ್ಮಿತು. ‘ವಾರ್ತಾಭಾರತಿ ಎ’ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಶೇಷವಾಗಿ ಈ ಬಾರಿ ಚೊಚ್ಚಲವಾಗಿ ನಡೆದ ಮಹಿಳಾ ಕ್ರಿಕೆಟ್ ಪಂದ್ಯಾಟವು ಗಮನ ಸೆಳೆಯಿತು. ಮಹಿಳಾ ವಿಭಾಗದಲ್ಲಿ ‘ಹೊಸದಿಗಂತ’ ತಂಡ ಪ್ರಥಮ ಸ್ಥಾನ ಹಾಗೂ ‘ಸನ್ಮಾರ್ಗ’ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ರೀಡೆಗಳ ವಿಜೇತರಿಗೆ ಗಣ್ಯರ ಸಮ್ಮುಖದಲ್ಲಿ ಬಹುಮಾನಗಳನ್ನು ವಿತರಿಸಿ ಗೌರವಿಸಲಾಯಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಕ್ರೀಡೆಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









