ಮಂಗಳೂರು : ಐಕಳ ಬಾವ ಕಾಂತಾಬಾರೆ-ಬೂದಾಬಾರೆ ಕಂಬಳವು ಈ ಬಾರಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಫೆಬ್ರವರಿ 7 ಮತ್ತು 8ರಂದು ವೈಭವದಿಂದ ನಡೆಯಲಿದೆ. ಈ ಐತಿಹಾಸಿಕ ಕಂಬಳೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಶಿಸ್ತುಬದ್ಧವಾಗಿ ಕೂಟವನ್ನು ನಡೆಸಲು ಸಮಿತಿ ಸಜ್ಜಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರು, ಕಂಬಳದ ಆವರಣದಲ್ಲಿ ಜೂಜಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಬಾರಿಯ ಕಂಬಳದಲ್ಲಿ ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕೋಣಗಳನ್ನು ಓಡಿಸುವ ಪ್ರಕ್ರಿಯೆಗೆ ನಿರ್ದಿಷ್ಟ ಸಮಯ ನಿಗದಿಪಡಿಸಲಾಗಿದೆ. ನಿಗದಿತ ಅವಧಿಯಲ್ಲಿ ಕೋಣಗಳನ್ನು ಕರೆಗೆ ತರದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಕೂಟವು ವಿಳಂಬವಿಲ್ಲದೆ ಸಾಗುವಂತೆ ನೋಡಿಕೊಳ್ಳಲಾಗುವುದು. ಫೆಬ್ರವರಿ 3ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನ್ನಸಂತರ್ಪಣೆ ಆರಂಭವಾಗಲಿದ್ದು, ಫೆಬ್ರವರಿ 6ರಂದು ಕಟೀಲು ಮೇಳದವರಿಂದ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.
ಫೆಬ್ರವರಿ 7ರಂದು ಬೆಳಗ್ಗೆ 8 ಗಂಟೆಗೆ ‘ಕರೆಮುಹೂರ್ತ’ ನಡೆಯಲಿದ್ದು, ವಾಸ್ತುತಜ್ಞ ಚಂದ್ರಶೇಖರ ಸ್ವಾಮೀಜಿಯವರು ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಪ್ರತಿಷ್ಠಿತ ‘ಕಂಬಳ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವಿಜೇತ ಕೋಣಗಳ ಯಜಮಾನರಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನದೊಂದಿಗೆ ವಿಶೇಷ ಗೌರವ ಸಲ್ಲಿಸಲಾಗುವುದು. ಕನಹಲಗೆ ವಿಭಾಗ ಸೇರಿದಂತೆ ಸೆಮಿಫೈನಲ್ ತಲುಪುವ ಎಲ್ಲಾ ಕೋಣಗಳಿಗೂ ವಿಶೇಷ ಪುರಸ್ಕಾರಗಳನ್ನು ಸಮಿತಿ ಘೋಷಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಕಂಬಳ, ಸುದ್ದಿಗಳು









