ಮಂಗಳೂರು : ನಗರದ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ, ಹಾವೇರಿ ಜಿಲ್ಲೆಯ ಮೂಲದ ಮಾರುತಿ ಲಮಾಣಿ (33) ಅವರು ಮೆದುಳಿನ ರಕ್ತಸ್ರಾವದಿಂದಾಗಿ ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 2016ನೇ ಬ್ಯಾಚ್ನ ಸಿಬ್ಬಂದಿಯಾಗಿದ್ದ ಇವರು ಕಳೆದ ಆರು ವರ್ಷಗಳಿಂದ ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಸಂಚಾರಿ ಉತ್ತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಈ ಹಿಂದೆ ಕದ್ರಿ ಪೊಲೀಸ್ ಠಾಣೆ ಹಾಗೂ ಸಿಎಆರ್ ಕಚೇರಿಯಲ್ಲೂ ಸುದೀರ್ಘ ಕಾಲ ಕೆಲಸ ಮಾಡಿದ್ದರು.
ಎರಡು ದಿನಗಳ ಹಿಂದಷ್ಟೇ ರಾತ್ರಿ ಪಾಳೆಯದ ಕರ್ತವ್ಯ ಮುಗಿಸಿ ಬಿಕರ್ನಕಟ್ಟೆಯ ತಮ್ಮ ನಿವಾಸಕ್ಕೆ ಮರಳಿದ್ದ ಮಾರುತಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ವಿಶ್ರಾಂತಿ ಪಡೆಯುತ್ತಿದ್ದಾಗ ಅವರ ಆರೋಗ್ಯದಲ್ಲಿ ಏಕಾಏಕಿ ಕುಸಿತ ಉಂಟಾದ ಕಾರಣ, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರಕ್ತದೊತ್ತಡದ ಸಮಸ್ಯೆಯಿಂದಾಗಿ ಕಳೆದ ಎರಡು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ವಿಶೇಷವೆಂದರೆ ಮಾರುತಿ ಲಮಾಣಿ ಅವರ ಪತ್ನಿಯೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಅಧಿಕಾರಿ ಗೋಪಾಲಕೃಷ್ಣ ಭಟ್ ಅವರ ಜೀಪ್ ಚಾಲಕರಾಗಿ ಹೆಚ್ಚಿನ ಸಮಯ ಕೆಲಸ ಮಾಡಿದ್ದ ಅವರು, ಸಹೋದ್ಯೋಗಿಗಳ ನಡುವೆ ಉತ್ತಮ ಸಂಬಂಧ ಹೊಂದಿದ್ದರು. ಅವರ ಅಕಾಲಿಕ ನಿಧನಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ









