ಮಂಗಳೂರು : ಬಂದರ್ನಲ್ಲಿ ವಾಹನದ ಡ್ಯಾಶ್ಬೋರ್ಡ್ನಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ (ಬಂದರ್) ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕಸಬ ಬೆಂಗ್ರೆ ನಿವಾಸಿ ಝಾಕೀರ್ ಹುಸೈನ್ ಯಾನೆ ಜಾಕಿ (38) ಬಂಧಿತ ಆರೋಪಿಯಾಗಿದ್ದಾನೆ. ಫೆಬ್ರವರಿ 8 ರಂದು ಮಣ್ಣಗುಡ್ಡ ಜಂಕ್ಷನ್ ಬಳಿ ಈತನನ್ನು ವಶಕ್ಕೆ ಪಡೆದ ಪೊಲೀಸರು, ಕಳ್ಳತನ ಮಾಡಿದ್ದ ಹಣದ ಪೈಕಿ 70,000 ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಹಾಗೂ ಕಳ್ಳತನದ ಹಣದಿಂದಲೇ ಖರೀದಿಸಿದ್ದ ಹೊಸ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಈ ಘಟನೆಯು ಫೆಬ್ರವರಿ 7 ರಂದು ನಡೆದಿತ್ತು. ದೂರುದಾರ ಮಹಮ್ಮದ್ ನಿಜಾಮುದ್ದಿನ್ ಅವರು ಅಡಿಕೆ ಮಾರಾಟ ಮಾಡಿದ 1,28,740 ರೂಪಾಯಿ ಹಣವನ್ನು ತಮ್ಮ ಟಾಟಾ ಇಂಟ್ರಾ ವಾಹನದ ಡ್ಯಾಶ್ಬೋರ್ಡ್ನಲ್ಲಿ ಇರಿಸಿದ್ದರು. ಬಂದರ್ನ ಜೆ.ಎಂ. ರೋಡ್ ಬಳಿ ಸಾಮಗ್ರಿ ಖರೀದಿಸಲು ಹೋಗಿ ಹಿಂದಿರುಗಿದಾಗ ಹಣ ನಾಪತ್ತೆಯಾಗಿರುವುದು ಕಂಡುಬಂದಿತ್ತು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಕೇವಲ 24 ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಝಾಕೀರ್ ಹುಸೈನ್ ಒಬ್ಬ ಹಳೇ ಕಳ್ಳನಾಗಿದ್ದು, ಈತನ ವಿರುದ್ಧ ಈಗಾಗಲೇ ಕುಂದಾಪುರ ಠಾಣೆಯಲ್ಲಿ ಮನೆ ಕಳವು ಹಾಗೂ ಮಂಗಳೂರು ದಕ್ಷಿಣ ಠಾಣೆಯಲ್ಲಿ ಆಟೋ ರಿಕ್ಷಾದಿಂದ ಹಣ ಕಳವು ಮಾಡಿದ ಪ್ರಕರಣಗಳು ದಾಖಲಾಗಿವೆ. ಮಂಗಳೂರು ಉತ್ತರ ಠಾಣೆಯ ಇನ್ಸ್ಪೆಕ್ಟರ್ ಸಚಿನ್ ಕುಮಾರ್ ಅವರ ನೇತೃತ್ವದ ತಂಡವು ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









