ಮಂಗಳೂರು : ಸುಳ್ಯದಿಂದ ಮೂಲ್ಕಿ ತನಕ ಕಾಂಗ್ರೆಸ್ ಹಮ್ಮಿಕೊಂಡಿರುವ ನರೇಗಾ ಹೆಸರಿನ ಪಾದಯಾತ್ರೆಯನ್ನು ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ತೀವ್ರವಾಗಿ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ಸಿಗರು ಈ ಪ್ರತಿಭಟನೆಯನ್ನು ಏತಕ್ಕಾಗಿ ಮಾಡುತ್ತಿದ್ದಾರೆ ಎಂಬ ಕನಿಷ್ಠ ಜ್ಞಾನವೂ ಸ್ವತಃ ಅವರಿಗಿಲ್ಲ. ರಾಮನ ಹೆಸರಿನ ವಿರುದ್ಧ ಹೋರಾಟ ನಡೆಸುವುದೇ ಅವರ ಮೂಲ ಉದ್ದೇಶವಾಗಿದೆ ಎಂದು ಶಾಸಕರು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಈ ಹಿಂದೆ ನರೇಗಾ ಯೋಜನೆಯಡಿ ನೂರಾರು ಕೋಟಿ ರೂಪಾಯಿಗಳ ಹಗರಣ ನಡೆದಿದೆ. ಈ ಹಿಂದೆ ಭ್ರಷ್ಟಾಚಾರಕ್ಕೆ ಮುಕ್ತ ಅವಕಾಶವಿದ್ದ ದಾರಿಗಳಿಗೆ ಈಗ ಹೊಸ ಕಾಯ್ದೆಯ ಮೂಲಕ ಕಡಿವಾಣ ಬಿದ್ದಿದೆ. ಹೊಸ ನಿಯಮಗಳ ಪ್ರಕಾರ ಯೋಜನೆಯಲ್ಲಿ ಯಾವುದೇ ಅಕ್ರಮ ಎಸಗಲು ಸಾಧ್ಯವಿಲ್ಲ. ಯಾರು ನಿಜವಾಗಿ ಕೆಲಸ ಮಾಡುತ್ತಾರೋ ಅವರಿಗೆ ಮಾತ್ರ ವೇತನ ಸಿಗುವಂತೆ ಪಾರದರ್ಶಕತೆ ತರಲಾಗಿದೆ. ಸರ್ಕಾರದ ಈ ನೈಜತೆಯನ್ನು (Genuinity) ಕಾಪಾಡುವ ಕ್ರಮದ ವಿರುದ್ಧ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನರೇಗಾ ಮೂಲಕ ಹಣ ಲೂಟಿ ಮಾಡುವ ಮಾರ್ಗಗಳು ಈಗ ಬಂದ್ ಆಗುತ್ತಿವೆ ಎನ್ನುವ ಆತಂಕ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಆ ಕಾರಣಕ್ಕಾಗಿ ಜನರ ದಿಕ್ಕು ತಪ್ಪಿಸಲು ಪಾದಯಾತ್ರೆಯ ನಾಟಕವಾಡುತ್ತಿದ್ದಾರೆ ಎಂದು ಭರತ್ ಶೆಟ್ಟಿ ಟೀಕಿಸಿದ್ದಾರೆ. ಭ್ರಷ್ಟಾಚಾರಕ್ಕೆ ಬ್ರೇಕ್ ಬಿದ್ದಿರುವುದೇ ಇಂದಿನ ಇವರ ಆಕ್ರೋಶಕ್ಕೆ ಅಸಲಿ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









