ಮಂಗಳೂರು : ನಗರದ ಕೊಟ್ಟಾರ ಬಳಿಯ ಕಾಲ್ಬಾವಿ ರಸ್ತೆಯಲ್ಲಿರುವ ಸಾಗರ್ ಕೋರ್ಟ್ಸ್ ಸಮೀಪ ಬುಧವಾರ ಮುಂಜಾನೆ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆಯೊಂದು ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ. ಉದಯ ಕುಮಾರ್ ಎಂಬುವವರಿಗೆ ಸೇರಿದ ಈ ಮನೆಯಲ್ಲಿ ಮುಂಜಾನೆ ಸುಮಾರು 3.15ರ ಹೊತ್ತಿಗೆ ವಿದ್ಯುತ್ ಅವಘಡದಿಂದ ಬೆಂಕಿ ಕಾಣಿಸಿಕೊಂಡಿದೆ. ಗಾಢ ನಿದ್ರೆಯಲ್ಲಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದರೂ, ಬೆಂಕಿಯ ಜ್ವಾಲೆಯನ್ನು ಕಂಡು ಎಚ್ಚೆತ್ತ ಉದಯ ಕುಮಾರ್, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ತಕ್ಷಣವೇ ಮನೆಯಿಂದ ಹೊರಬಂದಿದ್ದಾರೆ. ಇದರಿಂದಾಗಿ ಕುಟುಂಬದ ನಾಲ್ವರು ಸದಸ್ಯರು ಯಾವುದೇ ಅಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಧಾವಿಸಿ ಬಂದು ಸಹಾಯಕ್ಕೆ ನಿಂತಿದ್ದಾರೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಹಾಗೂ ಸಾರ್ವಜನಿಕರು ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಬೆಂಕಿಯ ಕೆನ್ನಾಲಿಗೆಗೆ ಮನೆಯೊಳಗಿದ್ದ ಪೀಠೋಪಕರಣಗಳು ಹಾಗೂ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿದ್ದು, ಮನೆಗೆ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ. ಸರಿಯಾದ ಸಮಯಕ್ಕೆ ಮನೆಯವರು ಎಚ್ಚೆತ್ತು ಹೊರಬಂದ ಕಾರಣ ಭಾರಿ ಪ್ರಾಣಾಪಾಯವೊಂದು ತಪ್ಪಿದಂತಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









