ಮಂಗಳೂರು : ಕುದ್ರೋಳಿಯಲ್ಲಿ ಕಾರ್ಯಾಚರಿಸುತ್ತಿರುವ ಮಹಾರಾಷ್ಟ್ರ ಮೂಲದ ‘ವೆಕ್ಸಾನ್’ (VEXON) ಎಂಬ ಕಂಪನಿಯು ಉದ್ಯೋಗದ ಆಮಿಷವೊಡ್ಡಿ ನೂರಾರು ವಿದ್ಯಾರ್ಥಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ವೆಬ್ ಡಿಸೈನಿಂಗ್ ಮತ್ತು ಮಾರ್ಕೆಟಿಂಗ್ ಕೆಲಸ ನೀಡುವುದಾಗಿ ನಂಬಿಸಿ, ತರಬೇತಿಯ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಹಣ ವಸೂಲಿ ಮಾಡಲಾಗುತ್ತಿದೆ. ಆರಂಭದಲ್ಲಿ ಕಡಿಮೆ ಸಂಬಳದ ಆಸೆ ತೋರಿಸಿ, ನಂತರ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಬ್ರೇನ್ ವಾಷ್ ಮಾಡಲಾಗುತ್ತಿದೆ ಎಂದು ಸಂತ್ರಸ್ತ ವಿದ್ಯಾರ್ಥಿಗಳು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಂಚನೆಗೆ ಒಳಗಾದ ವಿದ್ಯಾರ್ಥಿನಿ ರಮ್ಯಾ ಎಂಬವರು ಮಾತನಾಡಿ, ತಾಯಿ ಅಡವಿಟ್ಟ ಚಿನ್ನದ ಹಣವನ್ನು ಕಂಪನಿಗೆ ಪಾವತಿಸಿ ಮೋಸಹೋದ ನಂತರ ತೀವ್ರ ನೊಂದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಗಿ ತಿಳಿಸಿದ್ದಾರೆ. ಕಂಪನಿಯು 51 ಸಾವಿರ ರೂಪಾಯಿಗಳವರೆಗೆ ಹಣ ಪಡೆದು, ಬದಲಿಗೆ ಕಳಪೆ ಗುಣಮಟ್ಟದ ವಸ್ತುಗಳನ್ನು ನೀಡಿ ದೋಚುತ್ತಿದೆ. ಅಲ್ಲದೆ, ಹಣ ವಾಪಸ್ ಕೇಳಿದರೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಹಸ್ತಾ ಎಂಬ ಮತ್ತೊಬ್ಬ ವಿದ್ಯಾರ್ಥಿನಿ ಕೂಡ ತಾನು ಸಾಲ ಮಾಡಿ ಹಣ ಕಳೆದುಕೊಂಡಿರುವುದಾಗಿ ತಿಳಿಸಿದ್ದು, ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಜಾಲದಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ವಂಚನಾ ಜಾಲದ ವಿರುದ್ಧ ಎಬಿವಿಪಿ ಮತ್ತು ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕಳೆದ ಎರಡು ವರ್ಷಗಳಿಂದ ಈ ಅಕ್ರಮ ನಡೆಯುತ್ತಿದ್ದರೂ ಪೊಲೀಸರು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿರುವ ಸಂಘಟನೆಯ ನಾಯಕರು, ಕೂಡಲೇ ಇಂತಹ ನಕಲಿ ಕಂಪನಿಗಳನ್ನು ಮುಚ್ಚದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. ಸದ್ಯ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತಕ್ಷಣವೇ ಕ್ರಮ ಕೈಗೊಂಡು ಬಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









