ಮಂಗಳೂರು : ಮೂಲ್ಕಿಯ ಟೂರಿಸ್ಟ್ ಕಾರು ಪಾರ್ಕಿಂಗ್ ಸಮೀಪ ನಡೆದಿದ್ದ ಭೀಕರ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿದೆ. ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ತಮಿಳುನಾಡು ಮೂಲದ ಅಪರಾಧಿ ಮುರುಗನ್ (47) ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. 2022ರ ಮಾರ್ಚ್ 19ರಂದು ಹಣಕಾಸಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ಉಲ್ಲಂಜೆಯ ಹರೀಶ್ ಸಾಲ್ಯಾನ್ ಅವರನ್ನು ಕಲ್ಲಿನಿಂದ ಜಜ್ಜಿ ಅಮಾನುಷವಾಗಿ ಕೊಲೆ ಮಾಡಲಾಗಿತ್ತು.
ಈ ಪ್ರಕರಣದ ಕುರಿತು ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಂದಿನ ಇನ್ಸ್ಪೆಕ್ಟರ್ ಕುಸುಮಾಧರ್ ಅವರು ಸುದೀರ್ಘ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ತನಿಖಾ ತಂಡಕ್ಕೆ ಎಎಸ್ಐ ಸಂಜೀವ್ ಅವರು ಸಹಕಾರ ನೀಡಿದ್ದರು. ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಕೀಲರಾದ ಜ್ಯೋತಿ ಪ್ರಮೋದ್ ನಾಯಕ್ ಅವರು ಬಲವಾದ ವಾದ ಮಂಡಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯವು ಕೊಲೆಗಡುಕನಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ನ್ಯಾಯ ಒದಗಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









