ಮಂಗಳೂರು: ಮುಲ್ಕಿ ಸಮೀಪದ ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಎಂಬಲ್ಲಿ ನಡೆದಿದ್ದ ದಂಪತಿಗಳ ಜೋಡಿಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಅಲ್ಲೋನ್ಸ್ ಸಲ್ದಾನ ಎಂಬಾತನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ಮಹತ್ವದ ತೀರ್ಪು ನೀಡಿದೆ. ನ್ಯಾಯಾಧೀಶರಾದ ಜಗದೀಶ್ ಅವರು ಈ ತೀರ್ಪನ್ನು ಪ್ರಕಟಿಸಿದ್ದು, ಶಿಕ್ಷೆಯೊಂದಿಗೆ ಆರೋಪಿಗೆ 2 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದಾರೆ.
2020ರ ಏಪ್ರಿಲ್ 29ರಂದು ಮರದ ಗೆಲ್ಲು ಕಡಿಯುವ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಅಲ್ಲೋನ್ಸ್ ಸಲ್ದಾನ ತನ್ನ ಮನೆಯ ಸಮೀಪದ ನಿವಾಸಿಗಳಾದ ವಿನ್ಸೆಂಟ್ ಡಿಸೋಜ ಮತ್ತು ಅವರ ಪತ್ನಿ ಹೆಲೆನ್ ರೋಸಿ ರೋಡ್ರಿಗಸ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದನು. ಅಂದಿನ ಮುಲ್ಕಿ ಪೊಲೀಸ್ ನಿರೀಕ್ಷಕರಾಗಿದ್ದ ಜಯರಾಮ ಡಿ. ಗೌಡ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆಯನ್ನು ಆರಂಭದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ನಡೆಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ಜುಡಿತ್ ಓಲ್ಲಾ ಮಾರ್ಗರೇಟ್ ಅವರು ವಾದ ಮಂಡಿಸಿದ್ದರು. ಸಾಕ್ಷ್ಯಧಾರಗಳ ಆಧಾರದ ಮೇಲೆ ಆರೋಪಿಯ ಮೇಲಿನ ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಕಠಿಣ ಶಿಕ್ಷೆಯನ್ನು ವಿಧಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









