ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುರುವಾರ ಸಂಜೆ ಶವ್ವಾಲ್ ಚಂದ್ರ ದರ್ಶನವಾಗಿದ್ದು, ಇದರೊಂದಿಗೆ ಪವಿತ್ರ ರಂಜಾನ್ ಮಾಸಕ್ಕೆ ತೆರೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 20ರ ಶುಕ್ರವಾರದಂದು ಕರಾವಳಿಯಾದ್ಯಂತ ಅತ್ಯಂತ ಸಡಗರದಿಂದ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲು ನಿರ್ಧರಿಸಲಾಗಿದೆ. ಚಂದ್ರ ದರ್ಶನದ ಅಧಿಕೃತ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಮುಸ್ಲಿಂ ಸಮುದಾಯದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರು ಚಂದ್ರ ದರ್ಶನವಾಗಿರುವುದನ್ನು ಖಚಿತಪಡಿಸಿದ್ದು, ಶುಕ್ರವಾರ ಹಬ್ಬ ಆಚರಿಸುವಂತೆ ಕರೆ ನೀಡಿದ್ದಾರೆ. ಉಳ್ಳಾಲ ಭಾಗದಲ್ಲೂ ಖಾಝಿ ಕಾಂತಪುರಂ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ಸೂಚನೆಯಂತೆ ಹಬ್ಬದ ಸಿದ್ಧತೆಗಳು ನಡೆದಿವೆ ಎಂದು ಸ್ಥಳೀಯ ದರ್ಗಾ ಸಮಿತಿಗಳು ಸ್ಪಷ್ಟಪಡಿಸಿವೆ.
ಉಡುಪಿ ಜಿಲ್ಲೆಯಲ್ಲೂ ನಾಯಿಬ್ ಖಾಝಿ ಬಿ. ಕೆ. ಅಬ್ದರ್ರಹ್ಮಾನ್ ಮದನಿ ಮೂಲೂರು ಅವರು ಜಿಲ್ಲೆಯಾದ್ಯಂತ ಶುಕ್ರವಾರವೇ ಈದ್ ಆಚರಿಸಲಾಗುವುದು ಎಂದು ಘೋಷಿಸಿದ್ದಾರೆ. ಉಭಯ ಜಿಲ್ಲೆಗಳ ಪ್ರಮುಖ ಮಸೀದಿಗಳ ಪದಾಧಿಕಾರಿಗಳು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಸಾಮೂಹಿಕ ನಮಾಜ್ ಮತ್ತು ಹಬ್ಬದ ಆಚರಣೆಗಳಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









