ಮಂಜೇಶ್ವರ : ಕೇರಳ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದು, ಭಾರತೀಯ ಜನತಾ ಪಕ್ಷವು 39 ಅಭ್ಯರ್ಥಿಗಳನ್ನೊಳಗೊಂಡ ತನ್ನ ಎರಡನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಇದರೊಂದಿಗೆ ಪಕ್ಷವು ಇದುವರೆಗೆ ಒಟ್ಟು 86 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದಂತಾಗಿದೆ. ಹಿರಿಯ ನಾಯಕ ಕುಮ್ಮನಂ ರಾಜಶೇಖರನ್ ಅರಣ್ಮುಲ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಕುಂದರ ಕ್ಷೇತ್ರದಲ್ಲಿ ಸಾಮಾಜಿಕ ಜಾಲತಾಣದ ಖ್ಯಾತ ಮುಖ ಹಾಗೂ ರಿಯಾಲಿಟಿ ಶೋ ತಾರೆ ಡಾ. ರಾಬಿನ್ ರಾಧಾಕೃಷ್ಣನ್ ಅವರಿಗೆ ಟಿಕೆಟ್ ನೀಡಿರುವುದು ವಿಶೇಷವಾಗಿದೆ. ಇನ್ನು ಗುರುವಾಯೂರು ಕ್ಷೇತ್ರದಿಂದ ವಕೀಲ ಬಿ. ಗೋಪಾಲಕೃಷ್ಣನ್ ಕಣಕ್ಕಿಳಿಯಲಿದ್ದಾರೆ.
ಗಡಿ ಜಿಲ್ಲೆ ಕಾಸರಗೋಡಿನ ರಾಜಕೀಯ ಲೆಕ್ಕಾಚಾರಗಳು ಕುತೂಹಲ ಕೆರಳಿಸಿದ್ದು, ಕಾಸರಗೋಡು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಗಮನಾರ್ಹ ಮತ ಗಳಿಕೆಯೊಂದಿಗೆ ಪಕ್ಷದ ಬಲ ಹೆಚ್ಚಿಸಿದ್ದ ಇವರು ಮಂಜೇಶ್ವರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಮಂಜೇಶ್ವರದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಇವರನ್ನು ಕಾಸರಗೋಡಿಗೆ ನಿಯೋಜಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮತ್ತೊಂದೆಡೆ, ಕೇರಳ ಬಿಜೆಪಿಯ ಪ್ರಮುಖ ನಾಯಕ ಕೆ. ಸುರೇಂದ್ರನ್ ಅವರು ಐದನೇ ಬಾರಿಗೆ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಸೋಲನುಭವಿಸಿರುವ ಅವರಿಗೆ ಈ ಬಾರಿಯ ಚುನಾವಣೆ ಅಸ್ತಿತ್ವದ ಹೋರಾಟವಾಗಿದೆ. 2016ರಲ್ಲಿ ಕೇವಲ 89 ಮತಗಳಿಂದ ಸೋತಿದ್ದ ಅವರು, ಈ ಬಾರಿ ಗೆಲುವಿನ ನಗು ಬೀರಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ. ಕೊನ್ನಿ ಕ್ಷೇತ್ರದಲ್ಲೂ ಸೋಲಿನ ಕಹಿ ಉಂಡಿರುವ ಸುರೇಂದ್ರನ್ ಅವರಿಗೆ ಈ ಬಾರಿಯ ಸ್ಪರ್ಧೆ ಸವಾಲಿನಿಂದ ಕೂಡಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









