ಉಡುಪಿ : ಆತ್ರಾಡಿಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ಓರ್ವ ಬೈಕ್ ಸವಾರನ ಪ್ರಾಣವನ್ನು ಬಲಿಪಡೆದಿದೆ. ಆತ್ರಾಡಿ ಕಬ್ಯಾಡಿಯ ಅರ್ಮನ್ ರಟ್ ಫ್ಯಾಕ್ಟರಿ ಸಮೀಪ ಟೆಂಪೋ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಹೆರ್ಗಾ ಗ್ರಾಮದ ನಿವಾಸಿ 70 ವರ್ಷದ ಭಾಸ್ಕರ್ ನಾಯಕ್ ಎಂದು ಗುರುತಿಸಲಾಗಿದೆ.
ಘಟನೆಯ ವೇಳೆ ಟೆಂಪೋ ಆತ್ರಾಡಿಯಿಂದ ಮೂಡುಬೆಳ್ಳೆ ಕಡೆಗೆ ಚಲಿಸುತ್ತಿತ್ತು ಎನ್ನಲಾಗಿದೆ. ಬೈಕ್ ಮತ್ತು ಟೆಂಪೋ ನಡುವಿನ ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಬೈಕ್ನ ಹಿಂಬದಿ ಕುಳಿತಿದ್ದ ಮತ್ತೊಬ್ಬ ಸವಾರನಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಧಾವಿಸಿ ಸಹಾಯ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರ ನಿಯಮಗಳ ಪಾಲನೆಯಲ್ಲಿ ಉಂಟಾದ ಅಚಾತುರ್ಯ ಅಥವಾ ಅತೀ ವೇಗ ಈ ದುರ್ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









