ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಎಂಟನೇ ವಾರ್ಷಿಕ ಘಟಿಕೋತ್ಸವ ಮಾರ್ಚ್ ೨೮, ೨೦೨೬ರಂದು ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್ನಲ್ಲಿ ನಡೆಯಿತು.
ಮಂಗಳೂರು ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಘವೇಂದ್ರ ಶ್ರೀನಿವಾಸ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಾಧಿಪತಿಗಳಾದ ಡಾ. ಸಿಎ ಎ. ರಾಘವೇಂದ್ರ ರಾವ್ ರವರನ್ನು ನೆನೆಪಿಸಿಕೊಂಡು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯನ್ನು ಶ್ಲಾಘಿಸಿದರು. ವಿದ್ಯಾರ್ಥಿಯಾಗಿದ್ದಾಗ ಪಡೆದ ಜ್ಞಾನವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು. ಶಿಕ್ಷಿತ ಮನಸ್ಸು ಮತ್ತು ದೃಢವಾದ ಕೌಶಲ್ಯಗಳು ಇಂದಿನ ಜಗತ್ತಿನಲ್ಲಿ ಅತ್ಯಂತ ಮುಖ್ಯ, ಇವುಗಳು ಯುವಜನತೆಗೆ ವಿಫುಲ ಅವಕಾಶಗಳನ್ನು ಸೃಷ್ಟಿಸಿ, ಅವರ ಭವಿಷ್ಯವನ್ನು ಇನ್ನಷ್ಟು ಉಜ್ವಲಗೊಳಿಸುತ್ತವೆ ಎಂದು ಹೇಳಿದರು.
ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷ ಶ್ರೀ ಸತೀಶ್ ಯು ಪೈ ಅವರಿಗೆ ಮುದ್ರಣ ಕೈಗಾರಿಕಾ ಕ್ಷೇತ್ರದಲ್ಲಿ ನೀಡಿದ ಮಹತ್ವದ ಕೊಡುಗೆಗಳನ್ನು ಗುರುತಿಸಿ, ಡಿ.ಲಿಟ್ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನಿಸಲಾಯಿತು. ಅವರು ಪದವಿ ಸ್ವೀಕರಿಸಿ ಮಾತನಾಡಿ, ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು. ಡಾಕ್ಟರ್ ಆಫ್ ಲೆಟರ್ಸ್ (ಡಿ.ಲಿಟ್) ಪದವಿಯನ್ನು ನೀಡಿ ಗೌರವಿಸಿದ ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಲೆಟರ್ಸ್, ಅಂದರೆ, ಅಕ್ಷರಗಳು ಎಂದಿಗೂ ಅತ್ಯಂತ ನಿಜವಾದವು; ಅವು ಮುದ್ರಣದ ದೈನಂದಿನ ಕಾರ್ಯದ ಹೃದಯವಾಗಿವೆ. ಅಕ್ಷರಗಳು ಭಾಷೆಯ ಶಕ್ತಿ, ಮತ್ತು ಆಲೋಚನೆಗಳು ಒಂದು ಮನಸಿನಿಂದ ಮತ್ತೊಂದು ಮನಸಿಗೆ ಸಾಗುವ ಮಾರ್ಗವೂ ಆಗಿವೆ ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣವನ್ನು ಮಾಡಿದ ಡಾ. ಎ. ಶ್ರೀನಿವಾಸ್ ರಾವ್ ರವರು ಮಾತನಾಡಿ, ಸಮಾವೇಶ ಮತ್ತು ಸಮೂಹ ಬೆಳವಣಿಗೆಯಲ್ಲಿ ನಂಬಿಕೆ ಹೊಂದಿ, ತಮ್ಮ ವೃತ್ತಿ ಜೀವನದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ ಡಾ. ಟಿ. ಸತೀಶ್ ಯು. ಪೈ ಮತ್ತು ಶ್ರೀ ರಾಘವೇಂದ್ರ ಶ್ರೀನಿವಾಸ್ ಭಟ್ ರವರ ಸಾಧನೆಯನ್ನು ಶ್ಲಾಘಿಸಿದರು. ಡಾ. ಎ. ಶ್ರೀನಿವಾಸ್ ರಾವ್ ರವರು ಎಲ್ಲಾ ಪದವೀಧರರನ್ನು ಹಾಗೂ ಅವರ ಪೋಷಕರನ್ನು ಅಭಿನಂದಿಸಿದರು. ಜೀವನದಲ್ಲಿ ಯಶಸ್ಸು ಸಾಧಿಸಲು ಜ್ಞಾನ ಅತ್ಯಂತ ಮುಖ್ಯ, ಆದ್ದರಿಂದ ನಿರಂತಕ ಕಲಿಕೆಯ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಶ್ರೀನಿವಾಸ ವಿಶ್ವವಿದ್ಯಾಲಯ ವಿಶ್ವಸ್ತ ಮಂಡಳಿ ಸದಸ್ಯರಾದ ಪ್ರೊ. ಇಆರ್. ಶ್ರೀಮತಿ ಎ. ಮಿತ್ರಾ ಎಸ್. ರಾವ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋದಿಸಿದರು. ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು 8 ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಹೆಚ್.ಡಿ. ಪದವೀಧರರ ಮಾಹಿತಿಯನ್ನು ನೀಡಿದರು, ಹಾಗೂ ಕಳೆದ ವರ್ಷದಲ್ಲಿ ವಿಶ್ವವಿದ್ಯಾಲಯವು ಸಂಶೋಧನೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ತಿಳಿಸಿದರು.
ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್ (ವಿಶ್ವಸ್ತ ಮಂಡಳಿ ಸದಸ್ಯರು, ಶ್ರೀನಿವಾಸ ವಿಶ್ವವಿದ್ಯಾಲಯ), ಡಾ. ಸಂಧ್ಯಾ ಎಸ್. ಪೈ (ವ್ಯವಸ್ಥಾಪಕ ಸಂಪಾದಕರು, ತರಂಗ ವಾರಪತ್ರಿಕೆ), ಶ್ರೀ ಇಶಾನ್ ರಾವ್ (ವಿಶ್ವಸ್ತ ಮಂಡಳಿ ಸದಸ್ಯರು, ಶ್ರೀನಿವಾಸ ವಿಶ್ವವಿದ್ಯಾಲಯ), ಡಾ. ಕೆ. ಸತ್ಯನಾರಾಯಣ ರೆಡ್ಡಿ (ಉಪಕುಲಪತಿಗಳು), ಡಾ. ಅನಿಲ್ ಕುಮಾರ್ (ಕುಲಸಚಿವರು), ಡಾ. ಶ್ರೀನಿವಾಸ ಮಯ್ಯ ಡಿ. (ಕುಲಸಚಿವರು, ಮೌಲ್ಯಮಾಪನ ವಿಭಾಗ), ಡಾ. ಅಜಯ್ ಕುಮಾರ್ (ಕುಲಸಚಿವರು, ಅಭಿವೃದ್ಧಿ) ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಿಕೋತ್ಸವದಲ್ಲಿ 2769 ಪದವೀಧರರು (ಸ್ನಾತಕೋತ್ತರ -626, ಪದವಿ- 2023) ಪ್ರಮಾಣಪತ್ರ ಸ್ವೀಕರಿಸಿದರು. ವಿಶ್ವವಿದ್ಯಾಲಯವು ವಿವಿಧ ಕಾರ್ಯಕ್ರಮಗಳಲ್ಲಿ 236 ರ್ಯಾಂಕ್ಗಳನ್ನು ಮತ್ತು 48 ಪದವೀಧರರಿಗೆ ಕುಲಾಧಿಪತಿಗಳ ಚಿನ್ನದ ಪದಕವನ್ನು ಪ್ರದಾನಿಸಲಾಯಿತು. 1 ಡಿ.ಎಸ್ಸಿ., 1 ಡಿ.ಲಿಟ್. ಮತ್ತು 118 Ph. D ಪದವಿ ಪ್ರದಾನಿಸಲಾಯಿತು.
ಶ್ರೀನಿವಾಸ ವಿವಿ ಕುಲಸಚಿವ ಡಾ. ಅನಿಲ್ ಕುಮಾರ್ ಸ್ವಾಗತಿಸಿ, ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಶ್ರೀನಿವಾಸ ವಿವಿ ಮೌಲ್ಯಮಾಪನ ಕುಲಸಚಿವ ಡಾ. ಡಿ. ಶ್ರೀನಿವಾಸ ಮಯ್ಯ ವಂದಿಸಿದರು. ಪ್ರೊ. ರೋಹನ್ ಫೆರ್ನಾಂಡಿಸ್ ಮತ್ತು ಡಾ. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.
ಇಂದಿನ ವಿದ್ಯಾರ್ಥಿಗಳು ನವ ಭಾರತದ ಮುಂಜಾವಿನ ಧ್ವನಿಯಾಗಿದ್ದಾರೆ. ಜಗತ್ತು ನಿಮ್ಮನ್ನು ಕಾಯುವುದಿಲ್ಲ, ಆದರೆ ನಿಮಗಾಗಿ ಅವಕಾಶಗಳನ್ನು ಸೃಷ್ಟಿಸುತ್ತದೆ. ಇಂದು ನೀವು ಪದವಿಯನ್ನು ಸ್ವೀಕರಿಸುತ್ತಿದ್ದೀರಿ; ನಾಳೆ ನೀವು ಆಯ್ಕೆಗಳ ಮುಂದೆ ನಿಲ್ಲುವಿರಿ. ಜೀವನದಲ್ಲಿ ಸುಲಭ ಮಾರ್ಗದ ಬದಲು ಧೈರ್ಯವನ್ನು ಆಯ್ಕೆಮಾಡಿ, ತಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಿ.
- ಶ್ರೀ ಸತೀಶ್ ಯು ಪೈ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









