ಉಡುಪಿ : ಕಾರ್ಕಳ ಮತ್ತು ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರನ್ನು ಕುಂದಾಪುರ ನಾಡ ಗ್ರಾಮದ ಸುದರ್ಶನ್ ಶೆಟ್ಟಿ (29), ಹೇರೂರು ಗ್ರಾಮದ ಕರ್ತವ್ಯ ಶೆಟ್ಟಿ (27), ಬೈಂದೂರು ಮೂದುರು ಗ್ರಾಮದ ಅರುಣ್ ಶೆಟ್ಟಿ (29), ಹೆಬ್ರಿ ಬೆಳಂಜೆ ಗ್ರಾಮದ ತೇಜಸ್ (28) ಮತ್ತು ಬೈಂದೂರು ಶೀರೂರು ಗ್ರಾಮದ ಪ್ರಜ್ವಲ್ ಶೆಟ್ಟಿ (29) ಎಂದು ಗುರುತಿಸಲಾಗಿದೆ. ಈ ಆರೋಪಿಗಳು ಸಾರ್ವಜನಿಕರಿಂದ ಕ್ರಿಕೆಟ್ ಬೆಟ್ಟಿಂಗ್ಗೆ ಹಣ ಹೂಡಿಕೆ ಮಾಡುವಂತೆ ಪ್ರಚೋದಿಸಿ ವಂಚಿಸುತ್ತಿದ್ದರು ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ.
ಘಟನೆಯು ಮಾರ್ಚ್ 27ರಂದು ಮಧ್ಯಾಹ್ನ ಕಾರ್ಕಳದ ಹಂಚಿಕಟ್ಟೆ ಬಳಿ ಆರಂಭವಾಗಿತ್ತು. ಕಾರ್ಕಳ ಗ್ರಾಮಾಂತರ ಠಾಣೆಯ ಎಸ್ಸೈ ಪ್ರಸನ್ನ ಎಂ.ಎಸ್. ಮತ್ತು ಸಿಬ್ಬಂದಿ ಕಾರನ್ನು ನಿಲ್ಲಿಸಲು ಸೂಚಿಸಿದಾಗ, ಕಾರಿನಲ್ಲಿದ್ದ ಸುದರ್ಶನ್, ಕರ್ತವ್ಯ ಶೆಟ್ಟಿ, ಅರುಣ್ ಮತ್ತು ಇತರರು ಪೊಲೀಸರ ಮೇಲೆ ಕಾರು ಹತ್ತಿಸಿ ಕೊಲ್ಲಲು ಯತ್ನಿಸಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಬೆಳ್ಮಣ್ ಮಾರ್ಗವಾಗಿ ಶಿರ್ವ ಕಡೆಗೆ ವೇಗವಾಗಿ ತೆರಳಿದ್ದರು. ಶಿರ್ವ ಗ್ರಾಮದ ಪದವು ಬಳಿ ಶಿರ್ವ ಎಸ್ಸೈ ಮಂಜುನಾಥ ಮರಬದ ಅವರು ಕಾರನ್ನು ತಡೆಯಲು ಯತ್ನಿಸಿದಾಗ, ಚಾಲಕ ಕಿಟಕಿಯಿಂದಲೇ ಎಸ್ಸೈ ಅವರನ್ನು ದೂಡಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಾರಿಯಾಗಲು ಯತ್ನಿಸಿದ್ದನು.
ಕೊನೆಗೆ ಶಿರ್ವ ಪೇಟೆಯಲ್ಲಿ ಜಾಗರೂಕರಾಗಿದ್ದ ಪೊಲೀಸರು ಕಾರನ್ನು ತಡೆದು ನಿಲ್ಲಿಸಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ವಿಚಾರಣೆಯ ವೇಳೆ ಇವರು ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಕಾರ್ಕಳ ನಗರ ಮತ್ತು ಶಿರ್ವ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೊಲೀಸರ ಜೀವಕ್ಕೆ ಅಪಾಯ ತಂದೊಡ್ಡುವ ಇಂತಹ ದುಸ್ಸಾಹಸಗಳ ವಿರುದ್ಧ ಇಲಾಖೆಯು ಕಠಿಣ ಕ್ರಮಕ್ಕೆ ಮುಂದಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









