
ಮಂಗಳೂರು : ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಕಲಾ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಏರ್ ಇಂಡಿಯಾ ಎಕ್ಸ್ಪ್ರೆಸ್ನ “ಟೇಲ್ಸ್ ಆಫ್ ಇಂಡಿಯಾ” ಉಪಕ್ರಮದ ಭಾಗವಾಗಿ, ಸಂಪೂರ್ಣ ಕಲಾಕೃತಿಗಳಿಂದ ಅಲಂಕೃತಗೊಂಡ ವಿಶೇಷ ಬೋಯಿಂಗ್ 737-8 ವಿಮಾನವು ಸೋಮವಾರ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಈ ವಿಮಾನವನ್ನು “ಫೈಯಿಂಗ್ ಕ್ಯಾನ್ವಾಸ್” (ಹಾರಾಡುವ ಕಲಾಕೃತಿ) ಎಂದು ಕರೆಯಲಾಗುತ್ತಿದ್ದು, ಇದು ಪ್ರಯಾಣಿಕರಿಗೆ ಕೇವಲ ಪ್ರಯಾಣವನ್ನಷ್ಟೇ ಅಲ್ಲದೆ ಒಂದು ಚಲಿಸುವ ಸಾಂಸ್ಕೃತಿಕ ಅನುಭವವನ್ನು ನೀಡುವ ಗುರಿ ಹೊಂದಿದೆ.
ಖ್ಯಾತ ಕಲಾವಿದೆ ಓಶೀನ್ ಶಿವ ಅವರ ಅದ್ಭುತ ಕಲಾ ವಿನ್ಯಾಸವನ್ನು ಹೊಂದಿರುವ ಈ ವಿಮಾನವು, ಭಾರತದ ಮೊಟ್ಟಮೊದಲ ಸಂಪೂರ್ಣ ಕಲಾಕೃತಿಯಿಂದ ಅಲಂಕರಿಸಲ್ಪಟ್ಟ ವಿಮಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾಂಪ್ರದಾಯಿಕ ಕಲೆಗಳನ್ನು ಆಧುನಿಕ ಶೈಲಿಯೊಂದಿಗೆ ಸಂಯೋಜಿಸಿರುವ ಈ ವಿನ್ಯಾಸವು ನೋಡುಗರ ಗಮನ ಸೆಳೆಯುತ್ತಿದೆ. ಮಂಗಳೂರು ಮತ್ತು ಮುಂಬಯಿ ನಡುವಿನ ಸಂಚಾರದ ವೇಳೆ ಲಿಯೊನಾರ್ಡೋ ಕ್ರಿಸ್ಟೋಫರ್ ಮುಖ್ಯ ಪೈಲಟ್ ಆಗಿ ಹಾಗೂ ಲಿಯಾನ್ ವಾಸ್ ಸಹ-ಪೈಲಟ್ ಆಗಿ ಈ ವಿಮಾನವನ್ನು ಯಶಸ್ವಿಯಾಗಿ ಮುನ್ನಡೆಸಿದರು.
ವಿಶೇಷವೆಂದರೆ, ಏರ್ಇಂಡಿಯಾ ಎಕ್ಸ್ಪ್ರೆಸ್ ತನ್ನ ವಿಮಾನಗಳ ಬಾಲದ ಭಾಗದಲ್ಲಿ ವಿವಿಧ ರಾಜ್ಯಗಳ ಜಾನಪದ ಕಲೆಗಳನ್ನು ಪ್ರದರ್ಶಿಸುವ ಮೂಲಕ ಭಾರತದ ವೈವಿಧ್ಯತೆಯನ್ನು ಎತ್ತಿ ಹಿಡಿಯುತ್ತಿದೆ. ಈ ವಿಮಾನದ ವೇಗದ ಚಲನೆಯನ್ನು ಬಳಸಿಕೊಂಡು ಅದ್ಭುತವಾದ ವೀಡಿಯೊಗಳನ್ನು ಹೇಗೆ ಸೆರೆಹಿಡಿಯಬಹುದು ಎಂಬುದನ್ನು ಸಹ ಇದು ಪ್ರದರ್ಶಿಸುತ್ತದೆ. ಕಲೆ ಮತ್ತು ತಂತ್ರಜ್ಞಾನದ ಈ ಅಪೂರ್ವ ಸಂಗಮವು ವಿಮಾನಯಾನ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









