ಮಂಗಳೂರು : ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸೂಚನೆಯನ್ನು ನೀಡಿದ್ದು, ಏಪ್ರಿಲ್ 10 ರಿಂದ ಜಾರಿಗೆ ಬರುವಂತೆ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಸುಗಮ ಸಂಚಾರ ಹಾಗೂ ಟೋಲ್ ಕೇಂದ್ರಗಳಲ್ಲಿ ವಾಹನಗಳ ಕಾಯುವಿಕೆಯನ್ನು ತಪ್ಪಿಸುವ ಸಲುವಾಗಿ ಈ ಕಟ್ಟುನಿಟ್ಟಿನ ಡಿಜಿಟಲೀಕರಣ ಕ್ರಮಕ್ಕೆ ಮುಂದಾಗಿದೆ. ಈ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಚಾಲಕರು ಟೋಲ್ ದರವನ್ನು ಭೌತಿಕವಾಗಿ ನಗದಿನ ರೂಪದಲ್ಲಿ ನೀಡಲು ಅವಕಾಶವಿರುವುದಿಲ್ಲ.
ಒಂದು ವೇಳೆ ವಾಹನದಲ್ಲಿ ಫಾಸ್ಟ್ಟ್ಯಾಗ್ ಇಲ್ಲದಿದ್ದರೆ ಅಥವಾ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಅಂತಹ ಚಾಲಕರು ಯುಪಿಐ (UPI) ಮೂಲಕ ಪಾವತಿ ಮಾಡಲು ಅವಕಾಶವಿರುತ್ತದೆ. ಆದರೆ, ಡಿಜಿಟಲ್ ರೂಪದಲ್ಲಿ ಪಾವತಿಸಿದರೂ ಫಾಸ್ಟ್ಟ್ಯಾಗ್ ಇಲ್ಲದ ಕಾರಣಕ್ಕಾಗಿ ನಿಗದಿತ ಟೋಲ್ ಶುಲ್ಕದ ಮೇಲೆ ಶೇ. 25ರಷ್ಟು ಹೆಚ್ಚುವರಿ ದಂಡವನ್ನು ಪಾವತಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಡಿಜಿಟಲ್ ಪಾವತಿಗೂ ನಿರಾಕರಿಸುವ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ನಿಯಮ 14ರ ಅಡಿಯಲ್ಲಿ ರಸ್ತೆ ಪ್ರವೇಶವನ್ನೇ ನಿರಾಕರಿಸಲಾಗುತ್ತದೆ ಹಾಗೂ ಅಂತಹ ಮಾಲೀಕರಿಗೆ ಇ-ನೋಟಿಸ್ ಜಾರಿಗೊಳಿಸಲಾಗುತ್ತದೆ. ಈ ನೋಟಿಸ್ ಬಂದ ಮೂರು ದಿನದೊಳಗೆ ದಂಡ ಪಾವತಿಸದಿದ್ದರೆ ಮೊತ್ತ ದುಪ್ಪಟ್ಟಾಗುವ ಸಾಧ್ಯತೆಯಿದೆ.
ಸ್ಥಳೀಯ ನಿವಾಸಿಗಳು ಹಾಗೂ ವಿನಾಯಿತಿ ಅರ್ಹತೆ ಹೊಂದಿರುವವರಿಗೂ ಈಗಿನ ನಿಯಮದಲ್ಲಿ ಬದಲಾವಣೆ ತರಲಾಗಿದ್ದು, ಕೇವಲ ಗುರುತಿನ ಚೀಟಿ ತೋರಿಸಿ ಉಚಿತ ಪ್ರಯಾಣ ಮಾಡುವಂತಿಲ್ಲ. ಅಂತಹವರು ಕಡ್ಡಾಯವಾಗಿ ‘ಎಕ್ಸೆಂಪ್ಟೆಡ್ ಫಾಸ್ಟ್ಟ್ಯಾಗ್’ ಅಥವಾ ಡಿಜಿಟಲ್ ಪೋರ್ಟಲ್ ಮೂಲಕ ಅಧಿಕೃತ ಪಾಸ್ ಪಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಕೂಡಲೇ ತಮ್ಮ ಫಾಸ್ಟ್ಟ್ಯಾಗ್ ಕೆವೈಸಿ ಅಪ್ಡೇಟ್ ಮಾಡಿಕೊಳ್ಳಲು ಸೂಚಿಸಲಾಗಿದ್ದು, ಭವಿಷ್ಯದಲ್ಲಿ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









