ಮಂಗಳೂರು : ಹುಬ್ಬಳ್ಳಿಯ ಫಿಟ್ನೆಸ್ ಜಿಮ್ವೊಂದರಲ್ಲಿ ನಡೆದಿದೆ ಎನ್ನಲಾದ ಸಂಘಟಿತ ಲೈಂಗಿಕ ಶೋಷಣೆ ಮತ್ತು ‘ಲವ್ ಜಿಹಾದ್’ ಪ್ರಕರಣ ರಾಜ್ಯದಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯ ನೇತೃತ್ವದಲ್ಲಿ ವಿವಿಧ ಹಿಂದೂ ಸಂಘಟನೆಗಳ ಪದಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ದಂಧೆಯಲ್ಲಿ ಸಮೀರ್ ಮುಲ್ಲಾ ಮತ್ತು ಆತನ ಸಹೋದರಿ ತೈಸೀಮ್ ಮುಲ್ಲಾ ಕಿಂಗ್ಪಿನ್ಗಳಾಗಿದ್ದು, ಇವರು ಹಿಂದೂ ಯುವತಿಯರನ್ನು ಮೋಸದ ಜಾಲಕ್ಕೆ ಸಿಲುಕಿಸಿ ಅತ್ಯಾಚಾರ, ವಿಡಿಯೋ ಬಳಸಿ ಬ್ಲ್ಯಾಕ್ಮೇಲ್ ಹಾಗೂ ಮತಾಂತರಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ತನಿಖೆಯ ವೇಳೆ ಆರೋಪಿಗಳ ಮೊಬೈಲ್ನಲ್ಲಿ ಯುವತಿಯರ ಆಕ್ಷೇಪಾರ್ಹ ಚಿತ್ರಗಳು ಪತ್ತೆಯಾಗಿದ್ದು, ಹಲವು ಪೀಡಿತರು ಧ್ವನಿ ಎತ್ತುತ್ತಿದ್ದಾರೆ. ಈ ಜಾಲವು ಯುವತಿಯರನ್ನು ಹಣದ ಮೂಲವಾಗಿ ಬಳಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಇಂತಹ ಪ್ರಕರಣಗಳು ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ದೇಶದ ಹಲವೆಡೆ ವರದಿಯಾಗುತ್ತಿದ್ದು, ಫಿಟ್ನೆಸ್ ಕೇಂದ್ರಗಳ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿ, ಆರೋಪಿಗಳ ಮೇಲೆ ಕಠಿಣ ಕಾಯ್ದೆಗಳಡಿ ಕ್ರಮ ಕೈಗೊಳ್ಳಬೇಕೆಂದು ನಿಯೋಗ ಒತ್ತಾಯಿಸಿದೆ.
ಜಿಮ್ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದು ರಣರಾಗಿಣಿ ಶಾಖೆ ಒತ್ತಾಯಿಸಿದೆ. ಎಲ್ಲಾ ಜಿಮ್ ಸಿಬ್ಬಂದಿಗಳ ಪೊಲೀಸ್ ಪರಿಶೀಲನೆ ಕಡ್ಡಾಯಗೊಳಿಸುವುದು, ಮಹಿಳೆಯರಿಗಾಗಿ ಪ್ರತ್ಯೇಕ ಸಮಯ ಅಥವಾ ಮಹಿಳಾ ತರಬೇತುದಾರರನ್ನು ನೇಮಿಸುವುದು ಹಾಗೂ ಸಿಸಿಟಿವಿ ಕಡ್ಡಾಯಗೊಳಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಕಾತ್ಯಾಯಿನಿ ರಾವ್, ಗಣೇಶ್, ಸುಮಂಗಲಾ, ಪವಿತ್ರಾ ಕುಡ್ವ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









