ಮಂಗಳೂರು : ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯ ಹೆಸರಿನಲ್ಲಿ ಮಹಿಳೆಯರಿಗೆ ವಂಚನೆ ಮಾಡಲು ಹೊರಟಿದೆ ಎಂದು ಮಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷ ಅಧಿವೇಶನ ಕರೆದು ಈಗ ಮಸೂದೆ ಅನುಷ್ಠಾನಕ್ಕೆ ತರಲಾಗದೆ ಮುಖಭಂಗ ಅನುಭವಿಸಿರುವುದಕ್ಕೆ ಬಿಜೆಪಿ ಸರ್ಕಾರವೇ ನೇರ ಕಾರಣ ಎಂದು ಅವರು ಟೀಕಿಸಿದರು. ವಾಸ್ತವದಲ್ಲಿ ಮಹಿಳಾ ಸಬಲೀಕರಣಕ್ಕೆ ಅಡ್ಡಿಪಡಿಸುತ್ತಿರುವುದು ಬಿಜೆಪಿಯವರೇ ಹೊರತು ಬೇರೆ ಯಾರೂ ಅಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳ ವಿರೋಧವಿಲ್ಲ. 2023ರಲ್ಲಿ ಮಸೂದೆಯನ್ನು ಮಂಡಿಸಿದಾಗ ನಾವೆಲ್ಲರೂ ಸರ್ವಾನುಮತದಿಂದ ಸ್ವಾಗತಿಸಿದ್ದೆವು. ಆದರೆ, ಮೀಸಲಾತಿ ಜಾರಿಗೆ ಕ್ಷೇತ್ರ ಪುನರ್ ವಿಂಗಡನೆಯ ನೆಪವೊಡ್ಡುತ್ತಿರುವುದು ಸರಿಯಲ್ಲ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಶೇ. 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಲು ತೀರ್ಮಾನಿಸಿದರೆ ನಾವು ಇಂದೇ ಅದನ್ನು ಬೆಂಬಲಿಸುತ್ತೇವೆ. ಕ್ಷೇತ್ರ ಪುನರ್ ವಿಂಗಡನೆಗೂ ಮತ್ತು ಮಹಿಳೆಯರಿಗೆ ಮೀಸಲಾತಿ ನೀಡುವುದಕ್ಕೂ ಯಾವುದೇ ತಾಂತ್ರಿಕ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಸ್ತುತ ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿವೆ. ಒಂದು ವೇಳೆ ಈ ಮಸೂದೆಯನ್ನು ಮೊದಲೇ ಜಾರಿಗೆ ತಂದಿದ್ದರೆ, ಈ ಚುನಾವಣೆಯಲ್ಲೇ ಮಹಿಳೆಯರಿಗೆ ಶೇ. 33ರಷ್ಟು ಸೀಟುಗಳು ಸಿಗುತ್ತಿತ್ತು. ಆದರೆ, ಮಹಿಳೆಯರ ಹೆಸರಿನಲ್ಲಿ ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ ವಿಂಗಡನೆಯ ಹುನ್ನಾರ ನಡೆಸುತ್ತಿದೆ. ಈ ಕ್ರಮದಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯಾಗುವ ಆತಂಕವಿದೆ. ಮಹಿಳೆಯರ ಹೆಸರಿನಲ್ಲಿ ಅಧಿಕಾರ ಹಿಡಿಯುವ ಮೋದಿಯವರ ಈ ಸಂಚು ಈಗ ವಿಫಲವಾಗಿದೆ ಎಂದು ಸಚಿವರು ಗುಡುಗಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









