ಮಂಗಳೂರು : ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಕೀಳು ಮಟ್ಟದ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಹಿರಿತನದ ಗೌರವವನ್ನು ಕಳೆದುಕೊಂಡಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ತೀವ್ರವಾಗಿ ಟೀಕಿಸಿದ್ದಾರೆ. ಹಿರಿಯ ನಾಯಕರಾಗಿರುವ ಖರ್ಗೆಯವರು ಈ ಕೂಡಲೇ ತಮ್ಮ ಹೇಳಿಕೆಗೆ ದೇಶದ ಜನತೆಯ ಮುಂದೆ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ನಿಜವಾದ ಭಯೋತ್ಪಾದಕರನ್ನು ಸಹೋದರರು ಎಂದು ಕರೆಯುವುದು ಮತ್ತು ದೇಶಕ್ಕಾಗಿ ಹಗಲಿರುಳು ಶ್ರಮಿಸುವವರನ್ನು ಭಯೋತ್ಪಾದಕರು ಎಂದು ಜರಿಯುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಗಳ ಸಂದರ್ಭದಲ್ಲಿ ಕೇವಲ ಓಲೈಕೆ ರಾಜಕಾರಣಕ್ಕಾಗಿ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು ಕಾಂಗ್ರೆಸ್ ನಾಯಕರ ಹುಟ್ಟುಗುಣವಾಗಿದೆ. ಈ ಹಿಂದೆಯೂ ಇಂತಹ ವರ್ತನೆಗಳಿಗೆ ಜನತೆ ಚುನಾವಣೆಯ ಮೂಲಕ ತಕ್ಕ ಪಾಠ ಕಲಿಸಿದ್ದರೂ ಕಾಂಗ್ರೆಸ್ಸಿಗರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಕಾಮತ್ ಕಿಡಿಕಾರಿದ್ದಾರೆ. ಮೋದಿಯವರ ನಾಯಕತ್ವವನ್ನು ವಿಶ್ವವೇ ಒಪ್ಪಿಕೊಂಡಿದ್ದು, ಅವರು ಜಾಗತಿಕ ಮಟ್ಟದ ಅತ್ಯಂತ ಪ್ರಭಾವಶಾಲಿ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದನ್ನು ಅರಿಯದ ಕಾಂಗ್ರೆಸ್ ಹತಾಶೆಯಿಂದ ವರ್ತಿಸುತ್ತಿದೆ ಎಂದು ಅವರು ದೂರಿದರು.
ಭಾರತವು ವಿಶ್ವವ್ಯಾಪಿ ಮನ್ನಣೆ ಗಳಿಸಲು ಮೋದಿಯವರ ಶ್ರಮ ಅಪಾರವಾಗಿದ್ದು, ಅನೇಕ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಅವರನ್ನು ಗೌರವಿಸಿವೆ. ಇದೇ ಕಾರಣಕ್ಕಾಗಿ ದೇಶದ ಜನತೆ ಹೆಮ್ಮೆಯಿಂದ ಅವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿ ಆರಿಸಿದ್ದಾರೆ. ಬಿಜೆಪಿಯ ಈ ಅಭೂತಪೂರ್ವ ಯಶಸ್ಸನ್ನು ಮತ್ತು ಮೋದಿಯವರ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದೇ ಕಾಂಗ್ರೆಸ್ ನಾಯಕರು ದ್ವೇಷ ಕಾರುತ್ತಿದ್ದಾರೆ ಮತ್ತು ಹತಾಶೆಯ ಭಾವನೆಯಿಂದ ಇಂತಹ ಅಸಂವಿಧಾನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ವಾಗ್ದಾಳಿ ನಡೆಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









