ಮಂಗಳೂರು : ಕರಾವಳಿ ಭಾಗದ ಪ್ರಮುಖ ಕೇಂದ್ರವಾದ ಮಂಗಳೂರಿನಲ್ಲಿ ಉಚ್ಛ ನ್ಯಾಯಾಲಯದ ಸಂಚಾರಿ ಪೀಠವನ್ನು ಸ್ಥಾಪಿಸಲು ಪೂರಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಕೋರಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ. ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀ ರಾಜೇಶ್ ರೈ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ನ್ಯಾಯಮೂರ್ತಿಗಳಾದ ಶ್ರೀ ಹೆಚ್.ಟಿ. ನರೇಂದ್ರ ಪ್ರಸಾದ್ ಅವರನ್ನು ಭೇಟಿ ಮಾಡಿದ ನಿಯೋಗವು, ಮುಖ್ಯ ನ್ಯಾಯಮೂರ್ತಿಗಳ ಉದ್ದೇಶಿತ ಮನವಿಯನ್ನು ಹಸ್ತಾಂತರಿಸಿತು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂಬುದು ದಶಕಗಳ ಬೇಡಿಕೆಯಾಗಿದ್ದು, ಅದರ ಮೊದಲ ಹಂತವಾಗಿ ಸಂಚಾರಿ ಪೀಠದ ಅನಿವಾರ್ಯತೆಯನ್ನು ನ್ಯಾಯಾಧೀಶರ ಗಮನಕ್ಕೆ ತರಲಾಯಿತು.
ಸಂಚಾರಿ ಪೀಠದ ಕಾರ್ಯನಿರ್ವಹಣೆಗೆ ಅಗತ್ಯವಾದ ನ್ಯಾಯಾಲಯದ ಹಾಲ್, ನ್ಯಾಯಾಧೀಶರ ವಸತಿ ಗೃಹ ಮತ್ತು ಕಚೇರಿ ಸ್ಥಳಾವಕಾಶದ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮತ್ತು ಅಗತ್ಯ ವಸತಿ ಸೌಕರ್ಯಗಳನ್ನು ಮೀಸಲಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಈ ಸೌಲಭ್ಯಗಳ ಲಭ್ಯತೆಯನ್ನು ಪರಿಶೀಲಿಸಿ ವರದಿ ನೀಡಲು ಹೈಕೋರ್ಟ್ನಿಂದ ವಿಶೇಷ ಸಮಿತಿಯೊಂದನ್ನು ಜಿಲ್ಲೆಗೆ ಕಳುಹಿಸಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿಧಾನ ಪರಿಷತ್ ಸದಸ್ಯರು ಹಾಗೂ ಹೈಕೋರ್ಟ್ ಪೀಠ ಸ್ಥಾಪನಾ ಹೋರಾಟ ಸಮಿತಿಯ ಸಂಚಾಲಕರೂ ಆದ ಶ್ರೀ ಐವನ್ ಡಿ’ಸೋಜಾ ಅವರ ನೇತೃತ್ವದಲ್ಲಿ ನಡೆದ ಈ ಭೇಟಿಯ ಸಂದರ್ಭದಲ್ಲಿ, ಹೈಕೋರ್ಟ್ ವಕೀಲರಾದ ಶ್ರೀ ಅಜಯ್ ಮೆಲ್ರಿಕ್ ನೋರೊನ್ಹಾ ಉಪಸ್ಥಿತರಿದ್ದರು. ಸಂಚಾರಿ ಪೀಠದ ಅಗತ್ಯತೆಗಳ ಕುರಿತು ನ್ಯಾಯಮೂರ್ತಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಐವನ್ ಡಿ’ಸೋಜಾ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









