ಬಂಟ್ವಾಳ : ಸಜಿಪ ಮುನ್ನೂರು ಗ್ರಾಮದ ಆಲಾಡಿ-ಕೊಪ್ಪಳದಲ್ಲಿ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ತಾವು ಹೊಸದಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶದ ಔತಣಕೂಟಕ್ಕೆ ಸಂಬಂಧಿಕರನ್ನು ಆಹ್ವಾನಿಸಿದ್ದ ದಿನದಂದೇ ಯುವ ವಿದ್ವಾಂಸರಾದ ಅಮೀರ್ ಅರ್ಶದಿ (36) ಅವರು ಸೋಮವಾರ ಮುಂಜಾನೆ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುತ್ತುಮೊಣಕಾ ಅವರ ಪುತ್ರರಾದ ಇವರು ಮೂಲತಃ ಸಜಿಪನಾಡು ನಿವಾಸಿಯಾಗಿದ್ದು, ಪ್ರಸ್ತುತ ಸಜಿಪ ಮುನ್ನೂರು ಗ್ರಾಮದಲ್ಲಿ ವಾಸವಿದ್ದರು.
ಅಮೀರ್ ಅರ್ಶದಿ ಅವರು ಕಳೆದ ಐದು ವರ್ಷಗಳಿಂದ ತಾಳಿಪಡ್ಪು ಮಸ್ಜಿದುಲ್ ಹುದಾ ಮಸೀದಿಯಲ್ಲಿ ಖತೀಬ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅತ್ಯುತ್ತಮ ವಾಗ್ಮಿಯಾಗಿದ್ದ ಇವರು ಧಾರ್ಮಿಕ ಜಾಗೃತಿ ಮೂಡಿಸುವಲ್ಲಿ ಮತ್ತು ಯುವಜನತೆಯನ್ನು ಸರಿದಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗೆ ಇವರು ಮೂತ್ರಪಿಂಡ ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದ್ದು, ಭಾನುವಾರ ಮಧ್ಯರಾತ್ರಿ ಹಠಾತ್ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಬಿ.ಸಿ. ರೋಡ್ ಮೂಲದ ಖಾಸಗಿ ಆಸ್ಪತ್ರೆಗೆ ಹಾಗೂ ನಂತರ ಮಂಗಳೂರಿಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ.
ಸಜಿಪ ಮುನ್ನೂರು ಗ್ರಾಮದ ಆಲಂಪಾಡಿ-ಕೊಪ್ಪಳದಲ್ಲಿ ಅವರು ನಿರ್ಮಿಸಿದ ನೂತನ ಮನೆಯ ಗೃಹಪ್ರವೇಶವು ಏಪ್ರಿಲ್ 17 ರಂದು ಸರಳವಾಗಿ ನಡೆದಿತ್ತು. ಇದರ ಔತಣಕೂಟವನ್ನು ಏಪ್ರಿಲ್ 27ರ ಸೋಮವಾರ ಏರ್ಪಡಿಸಲಾಗಿತ್ತು. ವಿಶೇಷವೆಂದರೆ, ಭಾನುವಾರ ತಡರಾತ್ರಿಯವರೆಗೂ ಇವರು ಸ್ವತಃ ಆಪ್ತರಿಗೆ ಕರೆ ಮಾಡಿ ಔತಣಕ್ಕೆ ಆಹ್ವಾನಿಸಿದ್ದರು. ಅವರ ಆಹ್ವಾನ ಸ್ವೀಕರಿಸಿದ್ದ ಹಿತೈಷಿಗಳು ಇದೀಗ ಅವರ ಅಕಾಲಿಕ ನಿಧನದ ವಾರ್ತೆ ಕೇಳಿ ಆಘಾತಕ್ಕೊಳಗಾಗಿದ್ದಾರೆ. ಮೃತರು ಪೋಷಕರು, ಪತ್ನಿ ಹಾಗೂ ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









