ಮಂಗಳೂರು : ಕಂಕನಾಡಿ ಗರೋಡಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಮಹಮ್ಮದ್ ಶಾರೀಕ್ಗೆ ಎನ್ಐಎ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಪುರುಷೋತ್ತಮ ಪೂಜಾರಿ ಅವರು, ಶಾರೀಕ್ಗೆ ಕೇವಲ 10 ವರ್ಷಗಳ ಶಿಕ್ಷೆಯಲ್ಲ, ಜೀವಾವಧಿ ಶಿಕ್ಷೆಯಾಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಪರಾಧಿಯು ಈಗಾಗಲೇ ಕೆಲವು ವರ್ಷಗಳ ಶಿಕ್ಷೆ ಅನುಭವಿಸಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಹೊರಬರುತ್ತಾನೆ. ಆದರೆ ಯಾವುದೇ ತಪ್ಪು ಮಾಡದ ತಾನು ಕಳೆದ ಮೂರೂವರೆ ವರ್ಷಗಳಿಂದ ದೈಹಿಕ ಮತ್ತು ಮಾನಸಿಕವಾಗಿ ಅವನಿಗಿಂತ ಹೆಚ್ಚಿನ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಸ್ಫೋಟದ ಭೀಕರತೆಯಿಂದಾಗಿ ಸುಮಾರು 70 ದಿನಗಳ ಕಾಲ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಅವರು, ಈಗಲೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಶಾಸಕ ವೇದವ್ಯಾಸ ಕಾಮತ್ ಅವರು ಕೊಡಿಸಿದ ಹೊಸ ಆಟೋವನ್ನು ಜೀವನೋಪಾಯಕ್ಕಾಗಿ ಈಗ ತಾವೇ ಓಡಿಸುತ್ತಿದ್ದರೂ, ಆರೋಗ್ಯ ಸಮಸ್ಯೆಯಿಂದಾಗಿ ದಿನವಿಡೀ ದುಡಿಯಲು ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ ಮತ್ತು ಸಂಜೆ ಸ್ವಲ್ಪ ಸಮಯ ಮಾತ್ರ ಕೆಲಸ ಮಾಡುತ್ತಿದ್ದು, ತಿಂಗಳ ಔಷಧೋಪಚಾರಕ್ಕೆ ಕನಿಷ್ಠ 2,000 ರೂಪಾಯಿಗಳ ಅವಶ್ಯಕತೆಯಿದೆ. ಆಸ್ಪತ್ರೆಯ 9.50 ಲಕ್ಷ ರೂಪಾಯಿಗಳ ಬಿಲ್ ಮಗಳ ಇಎಸ್ಐ ಮೂಲಕ ಪಾವತಿಯಾಗಿದೆಯೇ ಹೊರತು ಸರ್ಕಾರದಿಂದ ಯಾವುದೇ ಹೆಚ್ಚಿನ ಆರ್ಥಿಕ ನೆರವು ಅಥವಾ ಸಾಂತ್ವನ ಸಿಕ್ಕಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಈ ಘಟನೆಯು ಪುರುಷೋತ್ತಮ ಪೂಜಾರಿ ಅವರ ಕುಟುಂಬದ ಬದುಕಿನ ಲಯವನ್ನೇ ತಪ್ಪಿಸಿತ್ತು. ಹಿರಿಯ ಮಗಳ ಮದುವೆಗೆಂದು ಕೂಡಿಟ್ಟ ಹಣವೆಲ್ಲ ಆಸ್ಪತ್ರೆ ವೆಚ್ಚಕ್ಕೆ ಖರ್ಚಾಯಿತು. ಇಂತಹ ಸಂಕಷ್ಟದ ಸಮಯದಲ್ಲಿ ಸ್ಥಳೀಯ ಮುಖಂಡರು, ಸಂಘ ಸಂಸ್ಥೆಗಳು ಮತ್ತು ಗುರು ಬೆಳದಿಂಗಳು ಫೌಂಡೇಶನ್ ನೀಡಿದ ನೆರವು ಅವರ ಕುಟುಂಬಕ್ಕೆ ಆಸರೆಯಾಯಿತು. ಪ್ರಸ್ತುತ ಕಿರಿಯ ಪುತ್ರಿಯ ಸಿಎ ಶಿಕ್ಷಣ ಮತ್ತು ಕುಟುಂಬದ ನಿರ್ವಹಣೆಗೆ ಆಟೋ ಓಡಿಸಿ ಬರುವ ಸಣ್ಣ ಮೊತ್ತವೇ ಆಧಾರವಾಗಿದೆ. ಸರ್ಕಾರವು ಇನ್ನಾದರೂ ತಮ್ಮ ನೋವನ್ನು ಗಮನಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









