ಮಂಗಳೂರು : ಕರ್ನಾಟಕದ ಕರಾವಳಿ ಭಾಗದಲ್ಲಿರುವ ಅತ್ಯಂತ ಪುರಾತನ ಹಾಗೂ ಐತಿಹಾಸಿಕ ನಿವೇಶನಗಳನ್ನು ತುರ್ತಾಗಿ ಸಂರಕ್ಷಿಸುವಂತೆ ಆಗ್ರಹಿಸಿ ಉಡುಪಿಯ ಆದಿಮ ಕಲಾ ಟ್ರಸ್ಟ್ (ರಿ.), ರಾಜ್ಯ ಪ್ರವಾಸೋದ್ಯಮ ಸಚಿವರಾದ ಎಚ್. ಕೆ. ಪಾಟೀಲ್ ಅವರಿಗೆ ಲಿಖಿತ ಮನವಿಯನ್ನು ಸಲ್ಲಿಸಿದೆ. ಐತಿಹಾಸಿಕ ತಾಣವಾದ ಬಾರಕೂರಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಸಚಿವರಿಗೆ, ಟ್ರಸ್ಟ್ನ ಸ್ಥಾಪಕ ಸಂಚಾಲಕ ಹಾಗೂ ಖ್ಯಾತ ಪುರಾತತ್ವ ವಿದ್ವಾಂಸ ಪ್ರೊ. ಟಿ. ಮುರುಗೇಶಿಯವರು ಈ ಕುರಿತು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರೊ. ಟಿ. ಮುರುಗೇಶಿಯವರು ತಾವು ರಚಿಸಿದ ‘ಕರ್ನಾಟಕ ಕರಾವಳಿಯ ಆದಿಮ ಕಲೆ’ ಎಂಬ ಸಂಶೋಧನಾ ಪುಸ್ತಕವನ್ನು ಸಚಿವರಿಗೆ ನೀಡಿ, ಕರಾವಳಿಯ ಪ್ರಾಚೀನ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು. ಸಚಿವರು ಅತ್ಯಂತ ಆಸಕ್ತಿಯಿಂದ ಪುಸ್ತಕದ ವಿವರಗಳನ್ನು ಗಮನಿಸಿ, ಈ ಭಾಗದ ಇತಿಹಾಸ ಮತ್ತು ಕಲೆಯ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ, ಪಾರಂಪರಿಕ ತಾಣಗಳ ರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮನವಿ ಪತ್ರದಲ್ಲಿ ಮುಖ್ಯವಾಗಿ ಅವಲಕ್ಕಿಪಾರೆ, ಬುದ್ಧನಜೆಡ್ಡು, ಗಾವಳಿ, ಮೆನಾಲ ಮತ್ತು ಬರದಕಲ್ಲುಬೋಳೆ ಅಂತಹ ಪ್ರಾಗೈತಿಹಾಸಿಕ ನಿವೇಶನಗಳ ರಕ್ಷಣೆಗೆ ಒತ್ತು ನೀಡಲಾಗಿದೆ. ಇದರೊಂದಿಗೆ ಬೃಹತ್ ಶಿಲಾಯುಗದ ಪ್ರಮುಖ ಕುರುಹುಗಳಾದ ಪಳ್ಳಿಯ ಮದ್ಮಲ್ಪಾದೆ ಮತ್ತು ಮೂಡುಕೋಣಾಜೆಯ ಮೊರಿಯರ ಬೆಟ್ಟದಲ್ಲಿರುವ ಸಮಾಧಿ ನಿವೇಶನಗಳನ್ನು ಸರ್ಕಾರಿ ದಾಖಲೆಗಳಲ್ಲಿ ಸಂರಕ್ಷಿತ ತಾಣಗಳೆಂದು ಘೋಷಿಸಿ, ಮುಂದಿನ ಪೀಳಿಗೆಗಾಗಿ ಉಳಿಸಿಕೊಡಬೇಕೆಂದು ಕೋರಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









