ವಿಟ್ಲ : ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಕಸಬಾ ಗ್ರಾಮದ ಶಿವಾಜಿನಗರದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿದ್ದ ಅಟೋ ರಿಕ್ಷಾವೊಂದರ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಮತ್ತು ವಿಟ್ಲ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಮೇ 10ರ ಭಾನುವಾರದಂದು ಖಚಿತ ಮಾಹಿತಿ ಮೆರೆಗೆ ನಡೆದ ಈ ದಾಳಿಯಲ್ಲಿ, ಮನೆಯೊಂದರ ಅಂಗಳದಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾದಲ್ಲಿ ಸಾಗಾಟಕ್ಕೆ ಸಿದ್ಧವಾಗಿದ್ದ ಅಕ್ಕಿ ಮೂಟೆಗಳನ್ನು ಪತ್ತೆಹಚ್ಚಲಾಗಿದೆ.
ಪರಿಶೀಲನೆಯ ವೇಳೆ ಅಟೋರಿಕ್ಷಾದಲ್ಲಿ ಒಟ್ಟು 15 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಡಲಾಗಿದ್ದ 679.38 ಕೆಜಿ ತೂಕದ ಪಡಿತರ ಅಕ್ಕಿ ಪತ್ತೆಯಾಗಿದೆ. ಈ ಅಕ್ಕಿಯ ಅಂದಾಜು ಮೌಲ್ಯ 23,098 ರೂಪಾಯಿಗಳೆಂದು ತಿಳಿದುಬಂದಿದೆ. ಸ್ಥಳದಲ್ಲಿದ್ದ ಆರೋಪಿ, ವಿಟ್ಲ ಕಸಬಾ ನಿವಾಸಿ ಅಲಿ ಅಕ್ಟರ್ (40) ಎಂಬಾತನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತಾನೇ ಈ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಪ್ರಸ್ತುತ ಅಕ್ರಮ ಅಕ್ಕಿ ಮತ್ತು ರಿಕ್ಷಾವನ್ನು ಅಧಿಕಾರಿಗಳು ಕಾನೂನು ಕ್ರಮಕ್ಕಾಗಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅವಶ್ಯಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅಕ್ರಮ ಸಾಗಾಟ ಜಾಲದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









