ಮಂಗಳೂರು : ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಇತ್ತೀಚೆಗೆ ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ಮತ್ತೆ ವಾಪಸ್ ತರುವ ನಿಟ್ಟಿನಲ್ಲಿ ಆದೇಶ ಹೊರಡಿಸಿರುವುದನ್ನು ವಿರೋಧಿಸಿ ಹಾಗೂ ಮುಂಬರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕಾನೂನುಬಾಹಿರ ಗೋಹತ್ಯೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳೂರಿನಲ್ಲಿ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ಒಟ್ಟಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದ್ದಾರೆ. ಸರ್ಕಾರದ ಇಂತಹ ನಿರ್ಧಾರಗಳು ಮತ್ತು ಪ್ರಸ್ತುತ ವಿದ್ಯಮಾನಗಳ ವಿರುದ್ಧ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿರುವ ಸಂಘಟನೆಯ ಮುಖಂಡರು, ಸಮಾಜದಲ್ಲಿ ಶಾಂತಿ ಮತ್ತು ಸಮಾನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಗಂಗಾಧರ್ ಕುಲ್ಕರ್ಣಿ ಒತ್ತಾಯಿಸಿದ್ದಾರೆ.
ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ವಸ್ತ್ರ ಸಂಹಿತೆ ಇರಬೇಕು ಎನ್ನುವುದೇ ದೇಶದ ಸಂವಿಧಾನದ ಮೂಲ ಆಶಯವಾಗಿದೆ ಎಂದು ಪ್ರತಿಪಾದಿಸಿದ ಮುಖಂಡರು, ಸರ್ಕಾರದ ಇತ್ತೀಚಿನ ನಡೆಯು ಶಾಲಾ ಮಕ್ಕಳಲ್ಲೇ ತಾರತಮ್ಯ ಮತ್ತು ಭೇದಭಾವವನ್ನು ಬಿತ್ತುವಂತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಶಾಲಾ ಆವರಣದಲ್ಲಿ ಹಿಜಾಬ್ಗೆ ಅವಕಾಶ ನೀಡಿ, ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ಹೇರುವುದು ರಾಜ್ಯ ಸರ್ಕಾರದ ತುಷ್ಟೀಕರಣ ರಾಜಕಾರಣದ ಪರಮಾವಧಿಯಾಗಿದೆ ಎಂದು ಅವರು ತೀವ್ರವಾಗಿ ಧಿಕ್ಕರಿಸಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ಅಸಮಾನತೆಯ ಭಾವನೆ ಮೂಡಿಸುವ ಇಂತಹ ವಿವಾದಾತ್ಮಕ ನಿರ್ಧಾರವನ್ನು ಸರ್ಕಾರವು ತಕ್ಷಣವೇ ಹಿಂಪಡೆಯಬೇಕು ಮತ್ತು ಶಾಲೆಗಳಲ್ಲಿ ಏಕರೂಪದ ನಿಯಮವನ್ನು ಮುಂದುವರಿಸಬೇಕು ಎಂದು ಹಿಂದೂ ಸಂಘಟನೆಗಳು ಜಂಟಿಯಾಗಿ ಆಗ್ರಹಿಸಿವೆ.
ಇದರೊಂದಿಗೆ, ಮುಂಬರುವ ಬಕ್ರೀದ್ ಹಬ್ಬದ ನಿಮಿತ್ತ ರಾಜ್ಯದಾದ್ಯಂತ ವ್ಯಾಪಕವಾಗಿ ಮತ್ತು ಅವ್ಯಾಹತವಾಗಿ ಕಾನೂನುಬಾಹಿರವಾಗಿ ಗೋವುಗಳ ಮಾರಣಹೋಮ ನಡೆಯುವ ಸಾಧ್ಯತೆಗಳಿರುವುದನ್ನು ಮುಖಂಡರು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ 2022ರ ಕಠಿಣ ಗೋಹತ್ಯೆ ನಿಷೇಧ ಕಾಯ್ದೆಯು ಜಾರಿಯಲ್ಲಿದ್ದರೂ ಸಹ, ಪ್ರಸ್ತುತ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗೋಹತ್ಯೆಗಳು ಮತ್ತು ಅಕ್ರಮ ಜಾನುವಾರು ಸಾಗಾಟಗಳು ಎಗ್ಗಿಲ್ಲದೆ ನಡೆಯುತ್ತಿರುವುದು ವಿಷಾದನೀಯ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾನ್ಯ ಜಿಲ್ಲಾಡಳಿತಕ್ಕೆ ಎಚ್ಚರಿಕೆಯನ್ನು ನೀಡಿರುವ ಪ್ರಮುಖರು, ಯಾವುದೇ ಕಾರಣಕ್ಕೂ ಜಾರಿಯಲ್ಲಿರುವ ಕಾನೂನನ್ನು ಉಲ್ಲಂಘಿಸಲು ಯಾರಿಗೂ ಅವಕಾಶ ನೀಡಬಾರದು ಮತ್ತು ಕಾಯ್ದೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಅಕ್ರಮ ಗೋಹತ್ಯೆಗಳನ್ನು ತಡೆಯುವಲ್ಲಿ ವಿಫಲರಾಗಿ, ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಅಥವಾ ಅನಾಹುತಗಳು ಸಂಭವಿಸಿದಲ್ಲಿ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಹಿಂದೂ ಮುಖಂಡರು ಎಚ್ಚರಿಸಿದ್ದಾರೆ. ಯಾವುದೇ ಸನ್ನಿವೇಶದಲ್ಲೂ ಗೋಹತ್ಯೆ ನಿಷೇಧ ಕಾಯ್ದೆಯ ಸಡಿಲಿಕೆಯನ್ನು ಅಥವಾ ಉಲ್ಲಂಘನೆಯನ್ನು ಸಹಿಸಲು ಸಾಧ್ಯವೇ ಇಲ್ಲ ಎನ್ನುವ ಕಡಕ್ ಸಂದೇಶವನ್ನು ಎಲ್ಲಾ ಸಂಘಟನೆಗಳು ಒಟ್ಟಾಗಿ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ರವಾನಿಸಿದ್ದು, ತಕ್ಷಣವೇ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಕಚೇರಿಯ ಮುಖಾಂತರ ಆಗ್ರಹ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವ ಸೇನಾ ಮುಖಂಡರಾದ ಆನಂದ್ ಶೆಟ್ಟಿ ಅಡ್ಯಾರ್ , ಗಂಗಾಧರ್ ಕುಲ್ಕರ್ಣಿ ಸಹಿತ ಮತ್ತಿತರರು ಉಪಸ್ಥಿತರಿದ್ದರು
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









