ಮಂಗಳೂರು : ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಉಳ್ಳಾಲ ಪೊಲೀಸ್ ಠಾಣಾ ಸರಹದ್ದಿನ ಉಚ್ಚಿಲ್ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೈನ್ ಅಲಿಯಾಸ್ ಟ್ಯಾಬ್ಲೆಟ್ ಆರೀಫ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಮಂಗಳೂರು ಸಿಸಿಬಿ ಪೊಲೀಸರು ಮೇ 25 ರಂದು ಮತ್ತೋರ್ವ ಪ್ರಮುಖ ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ. ನಗರದ ಪಡೀಲ್ ನಿವಾಸಿಯಾದ ಮೊಹಮ್ಮದ್ ಇಬ್ರಾಹಿಂ ಸಿನಾನ್ ಅಲಿಯಾಸ್ ಚಿನ್ನು (21) ಬಂಧಿತ ಆರೋಪಿಯಾಗಿದ್ದು, ಈತ ಈ ಹಿಂದೆ ಕೊಲೆಯಾಗಿದ್ದ ರೌಡಿಶೀಟರ್ ಟೊಪ್ಪಿ ನೌಫಾಲ್ ಎಂಬಾತನ ಸ್ವಂತ ಸಹೋದರನಾಗಿದ್ದಾನೆ.
ಕಳೆದ ಮಾರ್ಚ್ 27 ರಂದು ನಸುಕಿನ ಜಾವ ತೊಕ್ಕೊಟ್ಟು ಮೇಲ್ಸೇತುವೆಯ ಮೇಲೆ ಆರೀಫ್ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಕಾರಿನಲ್ಲಿ ಬೆನ್ನಟ್ಟಿ ಬಂದ ಹಂತಕರು, ಬೈಕ್ಗೆ ಡಿಕ್ಕಿ ಹೊಡೆದು ಕೆಡವಿದ್ದರು. ಬಳಿಕ ಆತನ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ನಡೆಸಿ ಕೊಲೆ ಮಾಡಿದ್ದರು. ಕೃತ್ಯ ಎಸಗಿದ ನಂತರ ಆರೋಪಿಗಳು ತಾವು ಬಳಸಿದ್ದ ಕಾರನ್ನು ಬಂಟ್ವಾಳದ ಬುಡೋಳಿ ಎಂಬಲ್ಲಿ ಬಿಟ್ಟು ತಲೆಮರೆಸಿಕೊಂಡಿದ್ದರು. ಆರಂಭದಲ್ಲಿ ಉಳ್ಳಾಲ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ತನಿಖೆಯನ್ನು ಸಿಸಿಬಿ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು.
ಈಗ ಬಂಧಿತನಾಗಿರುವ ಸಿನಾನ್ ಹಳೆಯ ಅಪರಾಧ ಹಿನ್ನೆಲೆ ಹೊಂದಿದ್ದು, ಈತನ ವಿರುದ್ಧ 2024ರಲ್ಲಿ ಮಂಗಳೂರು ಉತ್ತರ ಠಾಣೆಯಲ್ಲಿ ಹಲ್ಲೆ ಪ್ರಕರಣ ಹಾಗೂ 2025ರಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನದ ಕೇಸ್ ದಾಖಲಾಗಿತ್ತು. ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಆರೀಫ್ ಹತ್ಯೆಗೆ ನಡೆದಿದ್ದ ಪೂರ್ವಭಾವಿ ಸಂಚಿನ ಸಭೆಯಲ್ಲಿ ಈತ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ, ಮಾರ್ಚ್ನಲ್ಲಿ ಕೊಲೆ ಕೃತ್ಯ ಎಸಗಿದ ಬಾಡಿಗೆ ಹಂತಕರಿಗೆ ಆರ್ಥಿಕವಾಗಿ ನೆರವು ನೀಡಿ ಹಣಕಾಸಿನ ಸಂಚಾಲಕನಾಗಿ ಕೆಲಸ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಈ ಜಿದ್ದಿಜಿದ್ದಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಈಗಾಗಲೇ ಮೊಹಮ್ಮದ್ ರಿಫಾತ್ ಆಲಿ, ಇಬ್ರಾಹಿಂ ಖಲೀಲ್, ಜುಟ್ಟು ಅಶ್ಫಕ್, ಉಮ್ಮರ್ ಫಾರೂಕ್ ಇರ್ಫಾನ್, ಮೊಹಮ್ಮದ್ ಶಾಕೀರ್, ರಿಜ್ವಾನ್, ಅಕುಡು ಇರ್ಷಾದ್, ಮಹಮ್ಮದ್ ಹರ್ಷಾದ್, ಪುಚ್ಚೆ ನಿಶಾಕ್, ಕೊಕ್ಕಡ ಜುನೈದ್ ಹಾಗೂ ಮೊಹಮ್ಮದ್ ಸುಹೇಲ್ ಸೇರಿದಂತೆ ಒಟ್ಟು 11 ಮಂದಿ ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಇವರೆಲ್ಲರ ವಿರುದ್ಧ ಪೊಲೀಸರು ಕಠಿಣ ‘ಕೋಕಾ’ (KOCA) ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಿ ತನಿಖೆ ಮುಂದುವರಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









