ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಫ್ಲೈಓವರ್ ಮೇಲೆ ನಡೆದ ಮೀನು ವ್ಯಾಪಾರಿ ಹಾಗೂ ರೌಡಿ ಶೀಟರ್ ಆರಿಫ್ ಹುಸೇನ್ ಹತ್ಯೆ ಪ್ರಕರಣವು ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಅವರ ನೇತೃತ್ವದಲ್ಲಿ ಸಿಸಿಬಿ ಪೊಲೀಸರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಂಡಿದೆ. ನೌಫಾಲ್ ಸಹಚರ ಮಹಮ್ಮದ್ ರಿಫಾತ್ ಆಲಿ ನೇತೃತ್ವದ ತಂಡವೇ ಈ ಕೃತ್ಯ ಎಸಗಿದೆ ಎಂದು ಮೃತ ಆರಿಫ್ ಪುತ್ರ ಉಳ್ಳಾಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಂತಕರು ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಿಟ್ಲದ ಬುಡೋಳಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಅಲ್ಲಿಂದ ರಿಕ್ಷಾದ ಮೂಲಕ ತೆರಳಿ ಬಳಿಕ ಬಸ್ ಹತ್ತಿ ಬೆಂಗಳೂರಿಗೆ ಪಲಾಯನ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ತಂಡವು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಂತಕರಿಗಾಗಿ ಹುಡುಕಾಟ ನಡೆಸುತ್ತಿದೆ. ಆರೋಪಿಗಳ ಮೊಬೈಲ್ ಫೋನ್ಗಳು ಸ್ವಿಚ್ ಆಫ್ ಆಗಿರುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದರೂ, ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಶೋಧ ಮುಂದುವರಿಸಿದ್ದಾರೆ.
ಕೇವಲ ಬೆಂಗಳೂರು ಮಾತ್ರವಲ್ಲದೆ, ಆರೋಪಿಗಳು ಕೇರಳ ಅಥವಾ ಮುಂಬೈ ಕಡೆಗೂ ಹೋಗಿರುವ ಸಾಧ್ಯತೆಗಳಿದ್ದು, ತನಿಖಾ ವ್ಯಾಪ್ತಿಯನ್ನು ಹೊರರಾಜ್ಯಗಳಿಗೂ ವಿಸ್ತರಿಸಲಾಗಿದೆ. ಹಂತಕರಿಗೆ ಆಶ್ರಯ ನೀಡಿದವರು, ಹಣಕಾಸಿನ ನೆರವು ಒದಗಿಸಿದವರು ಹಾಗೂ ಪರಾರಿಯಾಗಲು ಸಹಕರಿಸಿದವರನ್ನು ಸಹ ಈ ಪ್ರಕರಣದಲ್ಲಿ ಆರೋಪಿಗಳೆಂದು ಪರಿಗಣಿಸಿ ಬಂಧಿಸಲು ಪೊಲೀಸರು ನಿರ್ಧರಿಸಿದ್ದಾರೆ. ಪ್ರಸ್ತುತ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೀಘ್ರವೇ ಆರೋಪಿಗಳು ಪತ್ತೆಯಾಗುವ ವಿಶ್ವಾಸ ವ್ಯಕ್ತವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









