ಮಂಗಳೂರು : ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ಭಾನುವಾರ ರಾತ್ರಿ ರಕ್ತಸಂಬಂಧವನ್ನೇ ಮರೆತು ನಡೆಸಿದ ಭೀಕರ ಕೊಲೆ ಪ್ರಕರಣವೊಂದು ವರದಿಯಾಗಿದೆ. ಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದ ಸಂದರ್ಭದಲ್ಲಿಯೇ, ಮದ್ಯದ ಅಮಲಿನಲ್ಲಿ ಸೃಷ್ಟಿಯಾಗಿದ್ದ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ಇಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಮಧುಸೂಧನ (38) ಎಂಬ ಅವಿವಾಹಿತ ಯುವಕನೇ ಸ್ವಂತ ಸೋದರಳಿಯನ ಕೈಯಿಂದ ಹತ್ಯೆಯಾದ ದುರ್ದೈವಿ.
ಕಾಡಬೆಟ್ಟುವಿನ ಕೇಶವ ಪೂಜಾರಿ ಅವರ ಮನೆಯಲ್ಲಿ ದೈವಕ್ಕೆ ‘ತಂಬಿಲ’ ಸೇವೆ ಹಮ್ಮಿಕೊಳ್ಳಲಾಗಿದ್ದು, ನೆರೆಹೊರೆಯವರು ಹಾಗೂ ಸಂಬಂಧಿಕರು ಜಮಾಯಿಸಿದ್ದರು. ಈ ಪವಿತ್ರ ಕಾರ್ಯಕ್ರಮದ ನಡುವೆಯೇ ಕೇಶವ ಪೂಜಾರಿ ಅವರ ಪುತ್ರ, ಪೆಟ್ರೋಲ್ ಬಂಕ್ ಉದ್ಯೋಗಿಯಾದ ರಾಹುಲ್ (23) ಎಂಬಾತ ತನ್ನ ಸ್ನೇಹಿತರೊಂದಿಗೆ ಸೇರಿ ಮನೆಯ ಹೊರಗಡೆ ಮದ್ಯಪಾನ ಮಾಡುತ್ತಾ ಜೋರಾಗಿ ಗದ್ದಲ ಎಬ್ಬಿಸುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಆತನ ಚಿಕ್ಕಪ್ಪ ಮಧುಸೂಧನ ಅವರು, ಪೂಜಾ ಕಾರ್ಯಕ್ರಮಕ್ಕೆ ಅಡ್ಡಿಯಾಗದಂತೆ ಹೊರಗೆ ಗಲಾಟೆ ಮಾಡಬೇಡಿ ಎಂದು ರಾಹುಲ್ನಿಗೆ ಬುದ್ಧಿವಾದ ಹೇಳಿದ್ದಾರೆ.
ತಮಗೆಲ್ಲರ ಎದುರು ಬುದ್ಧಿ ಹೇಳಿದ್ದರಿಂದ ತೀವ್ರ ಆಕ್ರೋಶಗೊಂಡ ರಾಹುಲ್, ವಿವೇಚನೆ ಕಳೆದುಕೊಂಡು ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಚಿಕ್ಕಪ್ಪ ಮಧುಸೂಧನ ಅವರ ಕುತ್ತಿಗೆಯ ಭಾಗಕ್ಕೆ ರಭಸವಾಗಿ ಇರಿದಿದ್ದಾನೆ. ಬಾಟಲಿ ಕುತ್ತಿಗೆಗೆ ಆಳವಾಗಿ ಚುಚ್ಚಿದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದ ಮಧುಸೂಧನ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅವರು ಅದಾಗಲೇ ಕೊನೆಯುಸಿರೆಳೆದಿದ್ದರು. ಕೃತ್ಯ ಎಸಗಿದ ಬೆನ್ನಲ್ಲೇ ಆರೋಪಿ ರಾಹುಲ್ ಸ್ಥಳದಿಂದ ಓಡಿಹೋಗಿದ್ದಾನೆ.
ಸದ್ಯ ಮೃತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ನಡೆದ ತಕ್ಷಣ ಪುಂಜಾಲಕಟ್ಟೆ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಪಾಪಿ ಸೋದರಳಿಯ ರಾಹುಲ್ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









