ಉಡುಪಿ : ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯರ ತಂಡವೊಂದು ಅತ್ಯಂತ ಸಂಕೀರ್ಣ ಹಾಗೂ ಸಾಹಸಮಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದೆ. ದೀರ್ಘಕಾಲದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರ ಗರ್ಭಕೋಶದಲ್ಲಿದ್ದ ಬರೋಬ್ಬರಿ 8 ಕಿಲೋ ಗ್ರಾಂ ತೂಕದ ಬೃಹತ್ ಗಡ್ಡೆಯನ್ನು (ಫೈಬ್ರಾಯ್ಡ್ ಯೂಟರಸ್) ಶಸ್ತ್ರಚಿಕಿತ್ಸೆ ಮೂಲಕ ಸುರಕ್ಷಿತವಾಗಿ ಹೊರತೆಗೆದು ವೈದ್ಯರು ಹೊಸ ಜೀವ ನೀಡಿದ್ದಾರೆ. ಸದ್ಯ ಆಪರೇಷನ್ ಯಶಸ್ವಿಯಾಗಿದ್ದು, ಮಹಿಳೆಗೆ ಸೂಕ್ತ ಚಿಕಿತ್ಸೆ ಮುಂದುವರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಈ ಅಪರೂಪದ ವೈದ್ಯಕೀಯ ಮೈಲಿಗಲ್ಲಿಗೆ ಕಾರಣವಾದ ಶಸ್ತ್ರಚಿಕಿತ್ಸೆಯನ್ನು ಸ್ತ್ರೀರೋಗ ತಜ್ಞರಾದ ಡಾ. ಶಶಾಂಕ್ ಕಿಣಿ, ಡಾ. ಜಾಸ್ಮಿನ್, ಡಾ. ಕವಿತಾ ಮತ್ತು ಡಾ. ಅಮೃತಾಂಶ್ ಅವರನ್ನೊಳಗೊಂಡ ಪ್ರಮುಖ ತಂಡ ನೆರವೇರಿಸಿದೆ. ಇವರಿಗೆ ಅರವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ ಮತ್ತು ಡಾ. ರಾಜ್ಗೋಪಾಲ್ ಭಂಡಾರಿ ಸಾಥ್ ನೀಡಿದ್ದು, ಶುಶ್ರೂಷಕಾಧಿಕಾರಿ ರಕ್ಷಿತಾ ಹಾಗೂ ಆಪರೇಷನ್ ಥಿಯೇಟರ್ ಸಹಾಯಕಿಯಾದ ಸಂಗೀತಾ ಅವರು ಯಶಸ್ವಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬಾಧಿತ 44 ವರ್ಷದ ಮಹಿಳೆಯು ಕಳೆದ ಒಂದು ವರ್ಷದಿಂದ ಅತಿಯಾದ ಹೊಟ್ಟೆನೋವಿನಿಂದ ನರಳುತ್ತಿದ್ದರು. ಮೊದಲಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಯಾವುದೇ ಗುಣಮುಖ ಕಾಣದಿದ್ದಾಗ, ಬೇಸತ್ತು ಉಡುಪಿಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿನ ವೈದ್ಯರು ಮಹಿಳೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ, ಆಕೆಯ ಹೊಟ್ಟೆಯು ಗರ್ಭಿಣಿಯಂತೆ ಉಬ್ಬಿಕೊಂಡಿರುವುದು ಮತ್ತು ಒಳಗೆ ನೀರು ತುಂಬಿದ ಗೆಡ್ಡೆ ಇರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು.
ಇದರ ಬೆನ್ನಲ್ಲೇ ಆಕೆಗೆ ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನ್ನಂತಹ ಸುಧಾರಿತ ಪರೀಕ್ಷೆಗಳನ್ನು ಮಾಡಿಸಿದಾಗ ಗರ್ಭಕೋಶದಲ್ಲಿ ಬೃಹತ್ ಗಡ್ಡೆ ಬೆಳೆದಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್ ಅವರೊಂದಿಗೆ ಸಮಾಲೋಚನೆ ನಡೆಸಿದ ತಜ್ಞ ವೈದ್ಯರ ತಂಡ, ಅವರ ಮಾರ್ಗದರ್ಶನದಂತೆ ಮೇ 25 ರಂದು ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿತು. ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ ಇಡೀ ತಂಡವನ್ನು ಜಿಲ್ಲಾ ಶಸ್ತ್ರಚಿಕಿತ್ಸಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇತ್ತ ಬಡ ರೋಗಿಗಳಿಗೆ ಇಂತಹ ಉನ್ನತ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯಕೀಯ ತಂಡಕ್ಕೆ ಮಹಿಳೆ ಕಣ್ಣೀರಿನಿಂದ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









