ಬಂಟ್ವಾಳ : ಬಂಟ್ವಾಳ ನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಅವರ ಸಿಬ್ಬಂದಿ ವರ್ಗ ಮೆಲ್ಕಾರ್ ಫ್ಲೈಓವರ್ ಸಮೀಪ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಸಂಶಯಾಸ್ಪದವಾಗಿ ಬಂದ ಕಾರೊಂದನ್ನು ತಡೆದು ನಿಲ್ಲಿಸಿದ ಪೊಲೀಸರು ತಪಾಸಣೆ ನಡೆಸಿದಾಗ, ಮಾದಕ ದ್ರವ್ಯ ಜಾಲದ ದೊಡ್ಡ ಗುಟ್ಟೊಂದು ರಟ್ಟಾಗಿದೆ. ಕಾರಿನ ಒಳಗೆ ಡ್ರಗ್ಸ್ ಸೇವನೆಗೆ ಬಳಸುವ ಉಪಕರಣಗಳು ಪತ್ತೆಯಾದ ತಕ್ಷಣವೇ ಅಲರ್ಟ್ ಆದ ಪೊಲೀಸರು, ವಾಹನದಲ್ಲಿದ್ದವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು.
ಪೊಲೀಸರ ಕಟು ವಿಚಾರಣೆಗೆ ಬಾಯಿಬಿಟ್ಟ ಆರೋಪಿಗಳನ್ನು ಪುದು ಗ್ರಾಮದ ಎ. ಜುಬೈರ್ (39), ಸಜಿಪ ಮುನ್ನೂರಿನ ಮೊಹಮ್ಮದ್ ಸವಾದ್ (36) ಮತ್ತು ಬಿ. ಮೂಡ ನಿವಾಸಿಯಾದ ಬಿ.ಎಂ. ರಶೀದ್ ಅಲಿಯಾಸ್ ಮಾರಿಮುತ್ತು ಎಂದು ಗುರುತಿಸಲಾಗಿದೆ. ಅಕ್ರಮವಾಗಿ ಸಾಗಿಸುತ್ತಿದ್ದ ಮಾದಕ ವಸ್ತುವನ್ನು ಶ್ರೀಮಂತರು ಹಾಗೂ ಯುವಕರಿಗೆ ದುಬಾರಿ ಬೆಲೆಗೆ ಮಾರಿ ಹಣ ಸಂಪಾದಿಸುವ ಜಾಲ ಇದಾಗಿತ್ತು ಎಂಬುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಖೆಡ್ಡಾಕ್ಕೆ ಬಿದ್ದ ಈ ಪೆಡ್ಲರ್ಗಳಿಂದ ಪೊಲೀಸರು ಅಂದಾಜು 7 ಲಕ್ಷದ 64 ಸಾವಿರ ರೂಪಾಯಿ ಮೌಲ್ಯದ 76 ಗ್ರಾಂ 40 ಮಿಲಿಗ್ರಾಂ ತೂಕದ ನಿಷೇಧಿತ ಎಂಡಿಎಂಎ (MDMA) ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಡ್ರಗ್ಸ್ ಸೇವನೆಗೆ ಬಳಸುತ್ತಿದ್ದ ಪರಿಕರಗಳು, ಆರೋಪಿಗಳು ಸಂಪರ್ಕಕ್ಕೆ ಬಳಸುತ್ತಿದ್ದ 3 ಮೊಬೈಲ್ ಫೋನ್ಗಳು ಮತ್ತು ಸಾಗಾಟಕ್ಕೆ ಬಳಸಿದ್ದ KA-19 MR-1997 ನೋಂದಣಿ ಸಂಖ್ಯೆಯ ಕಾರನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಸದ್ಯ ಸಿಕ್ಕಿಬಿದ್ದಿರುವ ಈ ಮೂವರ ವಿರುದ್ಧ ಎನ್ಡಿಪಿಎಸ್ (NDPS) ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಠಾಣೆಯ ಪೊಲೀಸರು, ಈ ಮಾದಕ ದ್ರವ್ಯದ ಮೂಲ ಯಾವುದು ಮತ್ತು ಇದರ ಹಿಂದೆ ಇರುವ ಪ್ರಮುಖ ಕಿಂಗ್ಪಿನ್ ಯಾರು ಎಂಬ ನಿಟ್ಟಿನಲ್ಲಿ ತನಿಖೆಯನ್ನು ತೇಜಗೊಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









