ಮೂಡುಬಿದಿರೆ : ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಮಿಜಾರು ಬಳಿ ಡಿಬಿಎಲ್ ಕಂಪನಿ ನಡೆಸಿರುವ ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯ ಅಸಲಿ ಮುಖವಾಡ ಈಗ ಕಳಚಿಕೊಂಡಿದೆ. ಮುಂಗಾರು ಆರಂಭದ ಮೊದಲ ಮಳೆಗೇ ಇಲ್ಲಿನ ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿದ್ದು, ಸಂಚಾರ ದುಸ್ತರಗೊಂಡಿದೆ. ಹೆದ್ದಾರಿ ನಿರ್ಮಾಣಕ್ಕೂ ಮುನ್ನ ನಿಯಮಾನುಸಾರ ಸುಸಜ್ಜಿತ ಸರ್ವೀಸ್ ರಸ್ತೆ ಮಾಡದ ಮತ್ತು ನೀರು ಸರಾಗವಾಗಿ ಹರಿದುಹೋಗಲು ದೊಡ್ಡ ಸೇತುವೆಯ ಅಗತ್ಯವಿದ್ದ ಜಾಗದಲ್ಲಿ ತೀರಾ ಸಣ್ಣದಾದ ಮೋರಿಯನ್ನು ನಿರ್ಮಿಸಿರುವುದೇ ಈ ದುಸ್ಥಿತಿಗೆ ಪ್ರಮುಖ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಪ್ರಸ್ತುತ ಹೆದ್ದಾರಿಯಲ್ಲಿ ಬೃಹತ್ ಕಂದಕ ನಿರ್ಮಾಣವಾಗಿದ್ದು, ಕೇವಲ ಕಲ್ಲುಗಳನ್ನು ಜೋಡಿಸಿ ಇಲಾಖೆಯು ಕೈತೊಳೆದುಕೊಂಡಿದೆ. ಯಾವುದೇ ಮುನ್ನೆಚ್ಚರಿಕೆ ಅಥವಾ ಸುರಕ್ಷತಾ ಫಲಕಗಳನ್ನು ಅಳವಡಿಸದ ಕಾರಣ, ರಾತ್ರಿ ಹೊತ್ತಿನಲ್ಲಿ ಈ ಮಾರ್ಗವಾಗಿ ಚಲಿಸುವ ವಾಹನ ಸವಾರರ ಜೀವಕ್ಕೆ ನೇರ ಕುತ್ತು ಎದುರಾಗಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸ್ಥಳೀಯ ನಿವಾಸಿ ಗಣೇಶ್, ಹೆದ್ದಾರಿ ಕಾಮಗಾರಿ ತೀರಾ ಕಳಪೆಯಾಗಿದೆ. ನೀರು ಹರಿಯಲು ಜಾಗವಿಲ್ಲದೆ ರಸ್ತೆಯಲ್ಲೇ ನಿಲ್ಲುತ್ತಿರುವುದರಿಂದ ಹಾಗೂ ನಿರ್ಮಿಸಲಾದ ಎರಡ್ಮೂರು ಮೋರಿಗಳು ಸಂಪೂರ್ಣ ಅವೈಜ್ಞಾನಿಕವಾಗಿರುವುದರಿಂದಲೇ ಈ ಅನಾಹುತ ಸೃಷ್ಟಿಯಾಗಿದೆ ಎಂದು ಮಾಧ್ಯಮಗಳ ಮುಂದೆ ದೂರಿದ್ದಾರೆ.
ಮತ್ತೊಬ್ಬ ಸ್ಥಳೀಯ ನಿವಾಸಿ ತನ್ಸೀರ್ ಮಾತನಾಡಿ, ಮಿಜಾರು ಪರಿಸರವು ಪ್ರಮುಖ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳನ್ನೊಳಗೊಂಡ ಶಿಕ್ಷಣ ಕಾಶಿಯಾಗಿದೆ. ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಇಲ್ಲಿ ಸಂಚರಿಸುತ್ತಾರೆ. ಹೆದ್ದಾರಿ ಇಲಾಖೆಯ ಬೇಜವಾಬ್ದಾರಿತನದಿಂದಾಗಿ ಜನ ಸಾಮಾನ್ಯರು ರಸ್ತೆಗಿಳಿಯಲು ಭಯಪಡುವಂತಾಗಿದೆ. ಈ ಕಳಪೆ ಕಾಮಗಾರಿಯ ವಿರುದ್ಧ, ಅದರಲ್ಲೂ ಮುಖ್ಯವಾಗಿ ನೀರಿನ ಹರಿವಿನ ಮಟ್ಟಕ್ಕಿಂತ ಮೇಲ್ಭಾಗದಲ್ಲಿ ಮೋರಿಯ ಅಡಿಪಾಯ ಹಾಕಿರುವುದರ ವಿರುದ್ಧ ಸಂಬಂಧಪಟ್ಟ ಇಲಾಖೆಗಳಿಗೆ ಈಗಾಗಲೇ 50ಕ್ಕೂ ಹೆಚ್ಚು ದೂರುಗಳನ್ನು ನೀಡಲಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಇಷ್ಟೊಂದು ದೂರುಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕರು (PD) ಕನಿಷ್ಠ ಒಂದು ಬಾರಿಯೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಸೌಜನ್ಯ ತೋರಿಲ್ಲ. ಅಷ್ಟೇ ಅಲ್ಲದೆ, ಕಾಮಗಾರಿ ಆರಂಭವಾದ ದಿನದಿಂದ ಹಿಡಿದು ಇಂದಿನವರೆಗೆ ಯಾವೊಬ್ಬ ಜನಪ್ರತಿನಿಧಿಯೂ ಇತ್ತ ತಲೆಹಾಕಿ ನೋಡಿಲ್ಲ. ತೆಂಕ ಮಿಜಾರಿನ ಈ ರಸ್ತೆ ಧರಾಶಾಯಿಯಾಗಲು ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕರು ಹಾಗೂ ಇಂಜಿನಿಯರ್ಗಳ ಹೊಣೆಗೇಡಿತನವೇ ಕಾರಣವಾಗಿದ್ದು, ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇವರ ವಿರುದ್ಧ ಜಿಲ್ಲಾಡಳಿತ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









