ಮಂಗಳೂರು : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ತನಿಖೆಯ ಆರಂಭದಲ್ಲೇ ಸಿಕ್ಕಿಬಿದ್ದಿದ್ದ ಪ್ರಮುಖ ಆರೋಪಿಗಳಲ್ಲೊಬ್ಬನಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಈ ಪ್ರಕರಣದ 18ನೇ ಆರೋಪಿಯಾಗಿರುವ 35 ವರ್ಷದ ಝಾಕೀರ್ ಸವಣೂರು ಎಂಬಾತನೇ ಈಗ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿರುವ ವ್ಯಕ್ತಿ.
ಹತ್ಯೆಯ ಸಮಾಲೋಚನೆ ಮತ್ತು ಸಂಚು ರೂಪಿಸುವಿಕೆಯಲ್ಲಿ ನೇರ ಪಾತ್ರ ವಹಿಸಿದ್ದ ಆರೋಪ ಎದುರಿಸುತ್ತಿದ್ದ ಈತನನ್ನು, ಕೊಲೆಯಾದ ಎರಡು ದಿನಗಳಲ್ಲೇ ಅಂದರೆ 2022ರ ಜುಲೈ 28 ರಂದು ಬೆಳ್ಳಾರೆಯ ಶಫೀಕ್ ಎಂಬಾತನ ಜೊತೆಗೆ ಪೊಲೀಸರು ಬಂಧಿಸಿದ್ದರು. ಈ ಹಿಂದೆ, ಹಂತಕರಿಗೆ ಆಶ್ರಯ ನೀಡಿದ ಅಪರಾಧದ ಹಿನ್ನೆಲೆಯಲ್ಲಿ ಸೆರೆವಾಸದಲ್ಲಿದ್ದ 26ನೇ ಆರೋಪಿ ಸೋಮವಾರಪೇಟೆಯ ಎಚ್.ವೈ.ರಿಯಾಜ್ಗೆ ಕೂಡ ಜಾಮೀನು ದೊರೆತಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಕಳೆದ 2022ರ ಜುಲೈ 26 ರಂದು ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಅಕ್ಷಯ್ ಚಿಕನ್ ಸೆಂಟರ್ ಮುಂಭಾಗದಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿದ್ದರು. ಘಟನೆಯ ತೀವ್ರತೆಯಿಂದಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ವಹಿಸಲಾಗಿದ್ದು, ಸದ್ಯದವರೆಗೆ ಒಟ್ಟು 26 ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









