ಮೂಡುಬಿದಿರೆ: ತಮ್ಮ ವಿಶಿಷ್ಟವಾದ ನಗುಮೊಗ ಹಾಗೂ ಹಾಸ್ಯಪ್ರಜ್ಞೆಯ ಸಂಭಾಷಣೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಮೂಡುಬಿದಿರೆಯ ಹಿರಿಯ ಚೇತನ ಕಮಲ ದೊಡ್ಡ (85 ವರ್ಷ) ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಮೂಡುಬಿದಿರೆ ತಾಲೂಕಿನ ಮೂಡುಮಾರ್ನಾಡು ನಿವಾಸಿಯಾಗಿದ್ದ ಇವರಿಗೆ ಇತ್ತೀಚೆಗೆ ಕಾಲಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಕರಾವಳಿಯ ಗತಕಾಲದ ಶ್ರೀಮಂತ ಸಂಸ್ಕೃತಿ ಮತ್ತು ಆಚಾರ-ವಿಚಾರಗಳ ಬಗ್ಗೆ ಡಿಜಿಟಲ್ ಜಗತ್ತಿನಲ್ಲಿ ಯುವ ಪೀಳಿಗೆಗೆ ಅರಿವು ಮೂಡಿಸುತ್ತಿದ್ದ ಇವರ ಅಗಲಿಕೆ ತುಳುನಾಡಿನ ನೆಟ್ಟಿಗರನ್ನು ತೀವ್ರ ಶೋಕ ಸಾಗರದಲ್ಲಿ ಮುಳುಗಿಸಿದೆ.
ಮಾರ್ನಾಡಿನ ದಿವಂಗತ ದೊಡ್ಡಣ್ಣ ಶೆಟ್ಟಿ ಅವರ ಧರ್ಮಪತ್ನಿ ಹಾಗೂ ಬೊಲ್ಪು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀನಿಥ್ ಶೆಟ್ಟಿ ಮಾರ್ನಾಡ್ ಅವರ ಅಜ್ಜಿಯಾಗಿದ್ದ ಕಮಲ ದೊಡ್ಡ, ವಯಸ್ಸಿನ ಹಂಗಿಲ್ಲದೆ ಇನ್ಸ್ಟಾಗ್ರಾಮ್ ಸೇರಿದಂತೆ ವಿಭಿನ್ನ ವೇದಿಕೆಗಳ ರೀಲ್ಸ್ಗಳಲ್ಲಿ ಸಕ್ರಿಯರಾಗಿದ್ದರು. ಕರಾವಳಿ ಶೈಲಿಯ ನಿರರ್ಗಳ ಮಾತು ಹಾಗೂ ಮುಗ್ಧ ನಗುವಿನ ಮೂಲಕವೇ ಇವರು ಲಕ್ಷಾಂತರ ವೀಕ್ಷಕರ ಮನ ಗೆದ್ದಿದ್ದರು.
ಸಾಮಾಜಿಕ ಜಾಲತಾಣಗಳ ಯಶಸ್ಸಿನ ಬೆನ್ನಲ್ಲೇ ಇವರಿಗೆ ಬೆಳ್ಳಿಪರದೆಯ ಅವಕಾಶವೂ ಒಲಿದುಬಂದಿತ್ತು. ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ, ಸದ್ಯದಲ್ಲೇ ತೆರೆಗೆ ಬರಲಿರುವ ‘ಶಂಕರಾಭರಣ’ ಎಂಬ ಕನ್ನಡ ಚಲನಚಿತ್ರದಲ್ಲಿ ಇವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಚಿತ್ರರಂಗ ಹಾಗೂ ಡಿಜಿಟಲ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಈ ಹಿರಿಯ ಜೀವದ ನಿಧನಕ್ಕೆ ಸಾರ್ವಜನಿಕರು ಹಾಗೂ ಕರಾವಳಿಯ ಕಲಾಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ತುಳುನಾಡು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









