ಮಂಗಳೂರು: ತನ್ನ ನೂರು ವರ್ಷಗಳ ಇತಿಹಾಸದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್) ಹತ್ತು ಹಲವು ಅಪಸ್ವರಗಳು, ಕಟು ಟೀಕೆಗಳು ಮತ್ತು ಎರಡು ಬಾರಿ ನಿಷೇಧಕ್ಕೊಳಗಾಗುವಂತಹ ಕಠಿಣ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಿದೆ ಎಂದು ಹಿಂದೂ ಸಂಘಟನೆಯ ಪ್ರಮುಖ ಮುಖಂಡರಾದ ಸತ್ಯಜಿತ್ ಸುರತ್ಕಲ್ ವಿಶ್ಲೇಷಿಸಿದ್ದಾರೆ. ಸಂಘವು ಎಂತಹದ್ದೇ ಅಡೆತಡೆಗಳು ಬಂದರೂ ಸಮಾಜ ಸೇವೆ ಮತ್ತು ತನ್ನ ಮೂಲ ಕಾರ್ಯಸೂಚಿಗಳಿಂದ ಎಂದಿಗೂ ಹಿಂದೆ ಸರಿದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಂಘಟನೆಯ ಸಿದ್ಧಾಂತ ಅಥವಾ ಕಾರ್ಯವೈಖರಿಯನ್ನು ಯಾರು ಬೇಕಾದರೂ ಪ್ರಶ್ನಿಸಬಹುದು, ಏಕೆಂದರೆ ಅದು ಸಂವಿಧಾನಬದ್ಧವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲೇ ಬರುತ್ತದೆ ಎಂದರು. ಆದರೆ, ಈ ಹಿಂದೆ ಸಂಘಕ್ಕೆ ಯಾವುದೇ ರೀತಿಯ ಸವಾಲು ಅಥವಾ ಟೀಕೆಗಳು ಎದುರಾದಾಗ ಸಾರ್ವಜನಿಕರೇ ಮುಂಚೂಣಿಗೆ ಬಂದು ಸಂಘದ ಬೆಂಬಲಕ್ಕೆ ನಿಲ್ಲುತ್ತಿದ್ದರು. ಇಡೀ ಸಮಾಜವು ಸಂಘವನ್ನು ತನ್ನದೇ ಕುಟುಂಬದ ಒಂದು ಭಾಗವಾಗಿ ಭಾವಿಸಿ ಪ್ರೀತಿಯಿಂದ ಸ್ವೀಕರಿಸಿತ್ತು ಎಂಬುದನ್ನು ಅವರು ಸ್ಮರಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಸಂಘದ ನೋಂದಣಿ ಮತ್ತು ಹಿಂದುತ್ವದ ಅಸ್ತಿತ್ವದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದಾಗ, ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ಸಂಘದ ಸಿದ್ಧಾಂತ ಮತ್ತು ಕಷ್ಟಕಾಲದ ಹೋರಾಟಗಳ ಮೂಲಕವೇ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದ ನಾಯಕರುಗಳು ನಿರೀಕ್ಷಿತ ಮಟ್ಟದಲ್ಲಿ ಧ್ವನಿ ಎತ್ತದೆ ಮೌನಕ್ಕೆ ಶರಣಾಗಿರುವುದು ಸರಿಯಲ್ಲ ಎಂಬ ಬೇಸರವನ್ನು ಅವರು ಹೊರಹಾಕಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಮೊದಲಿನಿಂದಲೂ ಸಂಘ ಪರಿವಾರದ ಸಿದ್ಧಾಂತಗಳ ಪ್ರಯೋಗಶಾಲೆ ಎಂದೇ ಗುರುತಿಸಲಾಗುತ್ತಿದ್ದು, ದಶಕಗಳಿಂದ ಸಾವಿರಾರು ಕಾರ್ಯಕರ್ತರು ರಕ್ತ ಬೆವರಿನಿಂದ ಬಿತ್ತಿದ ಹಿಂದುತ್ವದ ವಿಚಾರಧಾರೆಯ ಫಲವಾಗಿಯೇ ಇಂದು ಈ ಪ್ರಾಂತ್ಯದಲ್ಲಿ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಇಷ್ಟೊಂದು ಭದ್ರವಾದ ಯಶಸ್ಸು ಸಿಗಲು ಸಾಧ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದಿನ ದಿನಗಳಲ್ಲಿ ಸಂಘದ ಪರವಾಗಿ ಸಮಾಜದ ಪ್ರತಿಯೊಂದು ವರ್ಗವೂ ಒಗ್ಗಟ್ಟಿನಿಂದ ಧ್ವನಿಯಾಗುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಆ ಬದ್ಧತೆಯ ಮನೋಭಾವದಲ್ಲಿ ಅಲ್ಪಮಟ್ಟಿನ ಸ್ಥಿತ್ಯಂತರ ಕಾಣಿಸುತ್ತಿದೆ ಎಂದ ಅವರು, ಸಂಘಟನೆಯನ್ನು ನಮ್ಮದೇ ಎಂದು ಹೆಮ್ಮೆಯಿಂದ ಒಪ್ಪಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆಯೇ ಅಥವಾ ಸಾರ್ವಜನಿಕ ವಲಯದ ಕೆಲವು ಕಡೆಗಳಲ್ಲಿ ಸಂಘದ ಬಗ್ಗೆ ಅಸಮಾಧಾನ ಮೂಡಿದೆಯೇ ಎಂಬ ಗಂಭೀರ ಪ್ರಶ್ನೆಗಳು ಈಗ ಕಾಡಲಾರಂಭಿಸಿವೆ ಎಂದರು.
ಪ್ರಿಯಾಂಕ್ ಖರ್ಗೆ ಅವರಂತಹ ರಾಜಕಾರಣಿಗಳ ಕಾನೂನಾತ್ಮಕ ಪ್ರಶ್ನೆಗಳಿಗೆ ಸಂಘವು ಕಾನೂನಿನ ಚೌಕಟ್ಟಿನಲ್ಲೇ ಸಮರ್ಥವಾಗಿ ಉತ್ತರಿಸಬಲ್ಲದು, ಆದರೆ ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಸಂಘದ ಬಗ್ಗೆ ನಿರ್ಮಾಣವಾಗುತ್ತಿರುವ ಹೊಸ ರೀತಿಯ ನಕಾರಾತ್ಮಕ ಅಥವಾ ತಟಸ್ಥ ಮನಸ್ಥಿತಿಯ ಕುರಿತಾಗಿ ಸಂಘಟನೆಯ ಹಿರಿಯ ಮಾರ್ಗದರ್ಶಕರು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಬಂದಿದೆ ಎಂದು ಅವರು ಸಲಹೆ ನೀಡಿದರು.
ದೇಶಪ್ರೇಮಿ ವ್ಯಕ್ತಿಗಳ ನಿರ್ಮಾಣದ ಮೂಲಕವೇ ಶ್ರೇಷ್ಠ ರಾಷ್ಟ್ರದ ಪುನರ್ನಿರ್ಮಾಣ ಸಾಧ್ಯ ಎಂಬ ಸಂಘದ ಮೂಲ ತತ್ವ ಇಂದಿನ ತಲೆಮಾರಿಗೂ ಅತ್ಯಂತ ಪ್ರಸ್ತುತವಾಗಿದೆ. ದೇಶದ ಸರ್ವತೋಮುಖ ಪ್ರಗತಿಗೆ ನಿಷ್ಠಾವಂತ ವ್ಯಕ್ತಿಗಳ ಕೊಡುಗೆ ಅತ್ಯಗತ್ಯವಾಗಿದ್ದು, ಈ ಉನ್ನತ ಆಶಯದ ಕಾರ್ಯದಲ್ಲಿ ಯಾವುದೇ ಸಣ್ಣ ಲೋಪದೋಷಗಳೂ ಆಗಬಾರದು. ಮುಂದಿನ ದಿನಗಳಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂಘವು ಮುನ್ನಡೆಯಲಿದೆ ಎಂಬ ಆಶಯವನ್ನು ಸತ್ಯಜಿತ್ ಸುರತ್ಕಲ್ ವ್ಯಕ್ತಪಡಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










