ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ಅವರ ವರ್ತನೆಯ ವಿರುದ್ಧ ಸ್ವಪಕ್ಷದ ಕಾರ್ಯಕರ್ತರೇ ಈಗ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮಂಗಳೂರಿನಿಂದ ಕಾರ್ಕಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಯಲ್ಲಿನ ಅವೈಜ್ಞಾನಿಕತೆಯಿಂದಾಗಿ ಮೂಡಬಿದಿರೆಯ ಬನ್ನಡ್ಕ ಎಂಬಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ಈ ವಿಚಾರವಾಗಿ ಸಂಸದರನ್ನು ಭೇಟಿ ಮಾಡಲು ಹೋದ ಮುಖಂಡರಿಗೆ ಸಂಸದರು ಉಡಾಫೆಯ ಉತ್ತರ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೂಲ್ಕಿ-ಮೂಡಬಿದ್ರೆ ಬಿಜೆಪಿ ಮಂಡಲದ ಉಪಾಧ್ಯಕ್ಷ ಸೂರಜ್ ಜೈನ್ ಅವರು ಸಂಸದರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, “ಇಂಥವರು ನಮ್ಮ ಜನಪ್ರತಿನಿಧಿಯಾಗಿರುವುದು ನಮ್ಮ ದುರಂತ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಮೂಡಬಿದಿರೆಯ ಬನ್ನಡ್ಕ ಬಳಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸರ್ವಿಸ್ ರಸ್ತೆಯ ಕೊರತೆಯಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 20 ಸರಣಿ ಅಪಘಾತಗಳು ಸಂಭವಿಸಿ 8 ಜೀವಗಳು ಬಲಿಯಾಗಿವೆ. ಕೇವಲ ಕಳೆದ ಮೂರು ದಿನಗಳಲ್ಲೇ ನಾಲ್ಕು ಅಪಘಾತಗಳು ನಡೆದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಈ ಗಂಭೀರ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಮತ್ತು ಪರಿಹಾರ ಕೋರಲು ಸೂರಜ್ ಜೈನ್ ನೇತೃತ್ವದ ಬಿಜೆಪಿ ಮುಖಂಡರ ತಂಡ ಸಂಸದರನ್ನು ಭೇಟಿಯಾಗಿತ್ತು. ಈ ಸಂದರ್ಭದಲ್ಲಿ ಸಂಸದರು ಅಧಿಕಾರಿಗಳ ಎದುರೇ ಮುಖಂಡರಿಗೆ ಅವಮಾನ ಮಾಡಿದ್ದಾರೆ ಎನ್ನಲಾಗಿದ್ದು, ಹೆದ್ದಾರಿ ಇಲಾಖೆಯ ಕಾಮಗಾರಿಯೇ ಅಪಘಾತಗಳಿಗೆ ಕಾರಣ ಎಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಂದರ್ಶನದ ವೇಳೆ ಸಂಸದ ಬ್ರಿಜೇಶ್ ಚೌಟ ಅವರು “ಕಾಮಗಾರಿ ಪೂರ್ಣವಾಗುವವರೆಗೆ ಸರ್ವಿಸ್ ರಸ್ತೆ ಮಾಡಲು ಸಾಧ್ಯವಿಲ್ಲ, 2023ರಲ್ಲಿ ಮನವಿ ಕೊಟ್ಟಿದ್ದರೆ ಅದನ್ನು ಯಾರಿಗೆ ಕೊಟ್ಟಿದ್ದೀರೋ ಅವರ ಬಳಿಯೇ ಹೋಗಿ ಕೇಳಿ” ಎಂದು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, “ಜನರ ಪ್ರತಿಭಟನೆಗೆ ನಾನು ಹೆದರುವುದಿಲ್ಲ, ಸದ್ಯಕ್ಕೆ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ, ಆ ಕಡೆ ಬಂದಾಗ ನೋಡೋಣ” ಎಂಬ ಸಂಸದರ ಉಡಾಫೆ ಮಾತುಗಳು ಈಗ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸರಣಿ ಅಪಘಾತಗಳಿಂದ ಕಂಗೆಟ್ಟಿರುವ ಸ್ಥಳೀಯರು ಹಾಗೂ ರಿಕ್ಷಾ ಚಾಲಕರು ಸಂಸದರ ಈ ಮನೋಭಾವದ ವಿರುದ್ಧ ಕಿಡಿಕಾರುತ್ತಿದ್ದು, ಬಿಜೆಪಿ ಕಾರ್ಯಕರ್ತರೇ ಈಗ ಸಂಸದರ ವಿರುದ್ಧ ತಿರುಗಿಬಿದ್ದಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









