
ಮಂಗಳೂರು : ಕಂಕನಾಡಿ ಸಮೀಪದ ನಾಗುರಿಯಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಭೀಕರ ಮಳೆಗೆ ತಡೆಗೋಡೆ ಕುಸಿದು ಇಬ್ಬರು ಚಿಣ್ಣರು ಸೇರಿದಂತೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಅತ್ಯಂತ ಕರುಣಾಜನಕ ಹಾಗೂ ಹೃದಯ ವಿದ್ರಾವಕವಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ.
ದುರಂತ ನಡೆದ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ಮೃತಪಟ್ಟವರ ಆಪ್ತರಿಗೆ ಯಾವುದೇ ತರಹದ ತಡವಿಲ್ಲದೆ ತಕ್ಷಣವೇ ನಿಯಮಾನುಸಾರ ಗರಿಷ್ಠ ಪರಿಹಾರ ಧನ ವಿತರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬಳಿಕ ಆಸ್ಪತ್ರೆಗೆ ಧಾವಿಸಿದ ಅವರು, ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ವಿಚಾರಿಸಿ ಧೈರ್ಯ ತುಂಬಿದ್ದಾರಲ್ಲದೆ, ಸಂತ್ರಸ್ತರ ಸಂಪೂರ್ಣ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಭರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಹವಾಮಾನ ಇಲಾಖೆಯ ಮುಂದಿನ ದಿನಗಳ ಮಳೆಯ ಮುನ್ಸೂಚನೆಯನ್ನು ಉಲ್ಲೇಖಿಸಿದ ಶಾಸಕರು, ಜಿಲ್ಲೆಯಲ್ಲಿ ಅಪಾಯಕಾರಿ ಹಾಗೂ ಧಕ್ಕೆ ಉಂಟಾಗಬಹುದಾದ ಜಾಗಗಳೆಂದು ಈಗಾಗಲೇ ಗುರುತಿಸಲಾಗಿರುವ ಸರಣಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರ ಸುರಕ್ಷತೆಗೆ ಜಿಲ್ಲಾಡಳಿತವು ಯುದ್ಧೋಪಾದಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ. ಜೊತೆಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ಸಾರ್ವಜನಿಕರೂ ಸಹ ಅತ್ಯಂತ ಜಾಗರೂಕರಾಗಿರಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










